ಮಂಗಳೂರು, ಮಾ.21 : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಪತ್ರಿಕಾ ಭವನದಲ್ಲಿ ಗೌರವ ಅತಿಥಿ ಸನ್ಮಾನ ಸ್ವೀಕರಿಸಿ ಮಾತಾನಾಡಿದ ಗುಜರಾತ್ನ ಸ್ಮತಿ ವನದ ರೂವಾರಿ ಡಾ.ಆರ್.ಕೆ. ನಾಯರ್ ಅವರು, ನಾನು ಹುಟ್ಟಿದ್ದು ಕಾಸರಗೋಡಿನಲ್ಲಿ. ತಾನು ಚಿಕ್ಕವನಿದ್ದಾಗ ನಮ್ಮ ಕುಟುಂಬ ಸುಳ್ಯದ ಅರಂಬೂರಿಗೆ ಸ್ಥಳಾಂತರಗೊಂಡಿತು. ಸ್ಥಳೀಯ ಈಶ್ವರ ಭಟ್ಟರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಾ ಬೆಳೆದೆವು. ವಾಸ್ತವ್ಯಕ್ಕೆ ಸ್ವಂತ ಮನೆ ಇರಲಿಲ್ಲ. ಮುಂದೆ ಜಾಲ್ಲೂರಿನಲ್ಲಿ ಮನೆ ಮಾಡಿದೆವು ಎಂದರು.
ಬಳಿಕ ಮಾತಾನಾಡಿದ ಅವರು, ದ್ವಿತೀಯ ಪಿಯುಸಿ ತನಕ ಶಿಕ್ಷಣ. ಪಿಯುಸಿ ಪರೀಕ್ಷೆ ಯ ಗಣಿತ ವಿಷಯದಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿ ತಾಯಿಯತ್ತಿರ ಹಠ ಹಿಡಿದು 500 ರೂ.ಪಡೆದು ಸ್ನೇಹಿತ ಕಿಶೋರ್ ಜೊತೆ ಮುಂಬೈಗೆ ಬಸ್ ಹತ್ತಿದೆ. ಮುಂಬೈನಲ್ಲಿ ಅಣ್ಣನ ನೆರವಿನಲ್ಲಿ ಮೆಡಿಕಲ್ ಸ್ಟೋರ್ ಗೆ ಸೇರಿದೆ. ಸ್ನೇಹಿತ ಕಿಶೋರ್ ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೆ ಸೇರಿದರು. ಮುಂದೆ ಹೋಟೆಲ್, ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿದೆ.ಮುಂದೆ ಸೌಪರ್ಣಿಕಾ ಎಕ್ಸ್ಪೊರ್ಟ್ಸ್ ಎಂಬ ಕಂಪೆನಿ ಪ್ರಾರಂಬಿಸಿ,10 ವರ್ಷಗಳಲ್ಲಿ ದೊಡ್ಡ ಕಂಪೆನಿಯಾಗಿ ಬೆಳೆಯಿತು ಎಂದು ಆರ್ ಕೆ ನಾಯರ್ ಅವರು ತಿಳಿಸಿದರು.
ಕಾಡಿನ ಮೇಲೆ ವಿಶೇಷ ಪ್ರೀತಿ ಚಿಕ್ಕಂದಿನಲ್ಲೇ ಇತ್ತು. ಗುಜರಾತ್ನಲ್ಲಿ ಸಣ್ಣ ಕಾಡು ನೆಟ್ಟು ಬೆಳೆಸಿದೆ. ಅಲ್ಲಿಗೆ ಹಕ್ಕಿಗಳು ಬಂದು ಗೂಡು ಕಟ್ಟಿದವು. ಮುಂದೆ ಇಂಡಸ್ಟ್ರೀಯಲ್ ಎಸ್ಟೇಟ್, ಹೌಸಿಂಗ್ ಸೊಸೈಟಿ, ಆಸ್ಪತ್ರೆಯ ಬಳಿ ಸಣ್ಣ ಕಾಡು ಬೆಳೆಸುತ್ತಾ ಮುಂದುವರಿದೆ. ವಾಪಿ ಮತ್ತು ತಾರಪುರದ ಕೆಮಿಕಲ್ ಯಾರ್ಡ್ನಲ್ಲಿ ಕಾಡು ನೆಟ್ಟಿ ಬೆಳೆಸಿದೆ. ಈ ಪೈಕಿ ತಾರಾಪುರ ಕಾಡು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತು. ತಮಗೆ ಇದರಿಂದಾಗಿ ಮಹಾರಾಷ್ಟ್ರ ಸರಕಾರದಿಂದ ವಸುಂಧರಾ ಪ್ರಶಸ್ತಿ ಇಂಟರ್ನ್ಯಾಶನಲ್ ಪೀಸ್ ವಿವಿಯಿಂದ ಗೌರವ ಡಾಕ್ಟರೇಟ್ ಸಿಕ್ಕಿತು ಎಂದರು.
ಅತಿಥಿ ಸನ್ಮಾನ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ. ಎ.ಖಾದರ್ ಶಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ.ಭಟ್ ಉಪಸ್ಥಿತರಿದ್ದರು.