ಬೆಳ್ತಂಗಡಿ,ಫೆ.07 : ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಫೆ.8, ಭಾನುವಾರ ಸಂಜೆ 4 ಗಂಟೆಗೆ ಉದ್ಘಾಟನೆಯಾಗಲಿದೆ. ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ, ವಾಕ್ ಇನ್ ಟು ವಿದ್ವತ್, ಎ ಸ್ಟೆಪ್ ಇನ್ ಟು ಸಕ್ಸಸ್ ಎಂಬ ವಿಶೇಷ ಕಾರ್ಯಕ್ರಮವನ್ನು ಪರಿಚಯಿಸಲಾಗುತ್ತಿದೆ.ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರು ಉದ್ಘಾಟಿಸಲಿದ್ದಾರೆ.
ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬರೋಡದ ಖ್ಯಾತ ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ, ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಮೆಸ್ಕಂ ಚೇರ್ ಮನ್ ಕೆ.ಹರೀಶ್ ಕುಮಾರ್, ಬೆಳ್ತಂಗಡಿ ಸಿರೋ ಮಲಬಾರ್ ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಪ್ರಧಾನ ಗುರುಗಳಾದ ಫಾ.ಜೋಸೆಫ್ ವಲಿಯಪರಂಬಿಲ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಬೆಳ್ತಂಗಡಿ ಪೊಲೀಸ್ ವಿಭಾಗದ ಡಿವೈ.ಎಸ್.ಪಿ. ರೋಹಿಣಿ ಸಿ.ಕೆ., ಭಾಗವಹಿಸಲಿರುವರು.
ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ, ಶಿಕ್ಷಣ ಸಂತ ಹರೇಕಳ ಹಾಜಬ್ಬ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಅವರನ್ನು ಕಾಲೇಜು ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಗುವುದು.
ವಿದ್ವತ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪಠ್ಯಕ್ಕೆ ಪೂರಕ, ಪ್ರಯೋಗಶೀಲತೆಗೆ ಸಹಕಾರಿಯಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಸುಸಜ್ಜಿತ ಲ್ಯಾಬ್ ಸಜ್ಜುಗೊಳಿಸಲಾಗಿದ್ದು, ಅದರ ಉದ್ಘಾಟನೆಯು ಅಂದು ಮುಖ್ಯ ಅತಿಥಿಗಳಿಂದ ನೆರವೇರಲಿದೆ.
ಕಾರ್ಯಕ್ರಮ ಉದ್ಘಾಟನೆ ಬಳಿಕದ ದಿನದಲ್ಲಿ “ವಿದ್ವತ್ ಪ್ರತಿಭಾನ್ವೇಷಣೆ” ಎಂಬ ಕಾರ್ಯಕ್ರಮದಡಿ ಕರ್ನಾಟಕ ರಾಜ್ಯದ ಎಲ್ಲೆಡೆಯಿಂದ ಆಗಮಿಸುವ 10ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ “ಪ್ರತಿಭಾ ಪರೀಕ್ಷೆ” ಬರೆಯುವ ಅವಕಾಶವನ್ನು ವಿದ್ವತ್ ಎಜುಕೇಶನ್ ಫೌಂಡೇಶನ್ ನೀಡಲಿದೆ. ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಗೌರವ ನೀಡುವ ಸಲುವಾಗಿ ವಿದ್ವತ್ ಕೆಲವೊಂದು ಯೋಜನೆಗಳನ್ನು ಹಮ್ಮಿಗೊಂಡಿದೆ. ಅಗ್ರ ಕ್ರಮಾಂಕದಲ್ಲಿ ಗುರುತಿಸಿರುವ ವಿದ್ಯಾರ್ಥಿಗೆ “ಲ್ಯಾಪ್ಟಾಪ್” ಮತ್ತು ಇತರ ಪ್ರತಿಭಾನ್ವಿತ 10 ವಿದ್ಯಾರ್ಥಿಗಳಿಗೆ “ಟ್ಯಾಬ್” ನ್ನು ವಿಶೇಷ ಬಹುಮಾನವಾಗಿ ನೀಡಲಿದೆ. ಹಾಗೂ ಟ್ಯಾಲೆಂಟ್ ಟೆಸ್ಟ್ ಅಥವಾ ಪ್ರತಿಭಾ ಪರೀಕ್ಷೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಅವರ ಅಂಕಗಳಿಕೆಗನುಗುಣವಾಗಿ ಕಾಲೇಜು ಶುಲ್ಕದಲ್ಲಿ ವಿಶೇಷ ರಿಯಾಯಿತಿಯನ್ನು ಒದಗಿಸಲಾಗುತ್ತದೆ ಎಂದು ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ರೈ, ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ್ ಈ. ಮಂಡಗಳಲೆ, ಪ್ರಾಂಶುಪಾಲರಾದ ಹರೀಶ್ ಕೆ.ಆರ್. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.











