ಮಂಗಳೂರು, ಅ.22 : ಈಶಿ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮನೋಹರ್ ರೈ ವೈಪಾಲ ನಿರ್ಮಿಸಿರುವ ‘ಬನ’ ತುಳು ಚಲನಚಿತ್ರ ಅಕ್ಟೋಬರ್ 23ರಿಂದ ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬನ ಚಿತ್ರ ಮಂಗಳೂರು, ಸುರತ್ಕಲ್, ಪಡುಬಿದ್ರಿ, ಉಡುಪಿ, ಮಣಿಪಾಲ, ಕಾರ್ಕಳ, ದೇರಳಕಟ್ಟೆ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಸೇರಿದಂತೆ ಕರಾವಳಿಯ ವಿವಿಧ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.
ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಪತ್ರಕರ್ತ ಹಾಗೂ ನಟ ಜಯಪ್ರಕಾಶ್ ಶೆಟ್ಟಿ ಮಾತನಾಡಿ,ಚಿತ್ರದ ಚಿತ್ರೀಕರಣವನ್ನು ಕೇವಲ 14 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. ನಿಹಾಲ್ ರೈ ನಾಯಕನಾಗಿ ಹಾಗೂ ಕೃತಿ ಶ್ರೀನಿವಾಸ್ ಪೂಜಾರಿ ನಾಯಕಿಯಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರೂಪ ವರ್ಕಾಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇದಲ್ಲದೆ, ಶರತ್ ಆಳ್ವ, ರೂಪಾ.ಡಿ ಶೆಟ್ಟಿ, ಪ್ರೀಯ ಶೆಟ್ಟಿ, ವಿಜಯಹರಿ ರೈ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತಾ ಅಂಚನ್, ಭವ್ಯ ಪೂಜಾರಿ, ಧನ್ಯ ಪೂಜಾರಿ ಹಾಗೂ ಪ್ರವೀಣ್ ಕೊಡಕ್ಕಲ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಅರುಣ್ ರೈ ಪುತ್ತೂರು ಛಾಯಾಗ್ರಹಣ, ನವೀನ್ ನೇರಳ್ಕೊಡಿ ಸಂಕಲನ ಹಾಗೂ ಜಯಕಾರ್ತಿ ಸಂಗೀತ ಸಂಯೋಜನೆಯ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಮನೋಹರ್ ರೈ ವೈಪಾಲ, ಛಾಯಾಗ್ರಾಹಕ ಅರುಣ್ ರೈ ಪುತ್ತೂರು, ನಾಯಕ ನಟ ನಿಹಾಲ್ ರೈ, ನಟಿ ಕೃತಿ ಶ್ರೀನಿವಾಸ್ ಪೂಜಾರಿ, ಸವಿತಾ ಅಂಚನ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.











