ಬೆಂಗಳೂರು,ಅ.11 ‘ಕಟ್ಟಾಳನ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್ ಮತ್ತು ನಿರ್ಮಾಪಕ ಷರೀಫ್ ಮೊಹಮ್ಮದ್ ಅವರ ಪ್ರಾಜೆಕ್ಟ್‌ನಲ್ಲಿ, ನಟ ಆ್ಯಂಟನಿ ವರ್ಗೀಸ್ ಪೆಪೆ ಅವರ ನಟನೆಯ ಚಿತ್ರ ಇದಾಗಿದೆ.
ಪ್ಯಾನ್-ಇಂಡಿಯನ್ ಮಾರ್ಕೊ ನಂತರ, ಇದು ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್ನ ಮತ್ತೊಂದು ಪ್ರಯತ್ನ.
ನಿರ್ದೇಶಕ ಪಾಲ್ ಜಾರ್ಜ್ ಅವರ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರ, ಸಂಗೀತದ ವಿಚಾರಕ್ಕೆ ಬಂದರೆ, ದಕ್ಷಿಣ ಭಾರತದಾದ್ಯಂತ ಖ್ಯಾತಿ ಗಳಿಸಿದ ಕಂಟಾರಾ ಮತ್ತು ಮಹಾರಾಜ ಚಿತ್ರಗಳ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರು ಕಟ್ಟಾಳನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಿದ ಆ್ಯಕ್ಷನ್ ಸೀಕ್ವೆನ್ಸ್‌ಗಳಿಗೆ ಓಂಗ್-ಬಾಕ್ ಚಿತ್ರಗಳ ಮೂಲಕ ಹೆಸರು ಮಾಡಿದ ಸಾಹಸ ನಿರ್ದೇಶಕ ಕೇಚಾ ಕಾಂಫಕ್ಡೀ ಅವರ ತಂಡ ಸಂಯೋಜನೆ ಮಾಡಿದೆ. ಓಂಗ್-ಬಾಕ್ ಸಿನಿಮಾಗಳ ಮೂಲಕ ಹೆಸರು ಮಾಡಿದ ಆನೆ ಪಾಂಗ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ.
ಚಿತ್ರದಲ್ಲಿ ತೆಲುಗು ನಟ ಸುನೀಲ್ (ಪುಷ್ಪ, ಜೈಲರ್ ೨), ಕಬೀರ್ ದುಹಾನ್ ಸಿಂಗ್, ರಾಜ ತಿರಂದಾಸು, ಬೇಬಿ ಜೀನ್, ಪಾರ್ಥ್ ತಿವಾರಿ, ಹಾಗೂ ಮಲಯಾಳಂನ ಹಿರಿಯ ಕಲಾವಿದರಾದ ಜಗದೀಶ್ ಮತ್ತು ಸಿದ್ದಿಕ್ ಸೇರಿದಂತೆ ದೊಡ್ಡ ಕಲಾವಿದರ ಅಭಿನಯವಿರಲಿದೆ.
ಮಲಯಾಳಂ, ತಮಿಳು, ತೆಲುಗು, ಕನ್ನಡ, ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.ಇದೊಂದು ಪ್ಯಾನ್-ಇಂಡಿಯನ್ ದೃಶ್ಯಕಾವ್ಯವಾಗಿ ಪ್ರೇಕ್ಷಕರನ್ನು ತಲುಪಲಿದೆ ಎಂದು ಚಿತ್ರತಂಡ ಹೇಳಿದೆ.