ಮಂಗಳೂರು,ಡಿ. 27 : ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಧನುರ್ಮಾಸದ ವೈಕುಂಠ ಏಕಾದಶಿಯನ್ನು ಡಿ.30 ರಂದು ಭಕ್ತಿಪೂರ್ವಕವಾಗಿ ಆಚರಿಸಲಾಗುವುದು ಹಾಗೂ ಕ್ಷೇತ್ರಕ್ಕೆ ಭೇಟಿ ನೀಡುವ ಕುಟುಂಬದ ಓರ್ವ ಭಕ್ತರಿಗೆ ಪ್ರಸಾದ ರೂಪದಲ್ಲಿ ತುಳಸಿ ಗಿಡ ವಿತರಣೆ ಮಾಡಲಾಗುವುದೆಂದು ಗಣೇಶ್ ನಾಗ್ವೇಕರ್ ಅವರು ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ‘ನೈಕಾದಶ್ಯಾಃ ಪರಂ ವ್ರತಂ ಎಂಬ ಪುರಾಣ ವಚನದಂತೆ ಏಕಾದಶಿ ವ್ರತವೇ ಶ್ರೇಷ್ಠವೆಂದು ಶಾಸ್ತ್ರಗಳು ಹೇಳುತ್ತವೆ. ಈ ದಿನ ವೈಕುಂಠದ್ವಾರ ತೆರೆದಿರುತ್ತದೆ ಎಂಬ ಭಕ್ತರ ನಂಬಿಕೆ ಇದೆ. ವೈಕುಂಠ ಏಕಾದಶಿ ದಿನ ಶ್ರೀ ವೆಂಕಟೇಶ್ವರ ಅಥವಾ ಶ್ರೀ ವಿಷ್ಣು ದೇವರ ದರ್ಶನ ಮಾಡಿದರೆ ಸ್ವರ್ಗಪ್ರಾಪ್ತಿ ಹಾಗೂ ಆತ್ಮಿಕ ಶಾಂತಿ ದೊರೆಯುತ್ತದೆ ಎಂಬ ಪ್ರತೀತಿ ಇದೆ ಎಂದರು.
ಈ ಪವಿತ್ರ ಪರ್ವಕಾಲದಲ್ಲಿ ಲೋಕಕಲ್ಯಾಣ ಹಾಗೂ ಚೈತನ್ಯಾಭಿವೃದ್ಧಿಯ ಸಂಕಲ್ಪದೊಂದಿಗೆ ಶ್ರೀ ದೇವರ ಸಾನಿಧ್ಯದಲ್ಲಿ ನಾಮತ್ರಯ ಮಹಾಮಂತ್ರ ಜಪಯಜ್ಞ, ಪ್ರಶ್ನೆಯಾಗ, ಅಷ್ಟಾವಧಾನ ಸೇವೆಗಳನ್ನು ಶ್ರೀ ದೇವರ ಪ್ರೇರಣೆಯಂತೆ ಹಾಗೂ ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ.ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಬೇಕೆಂದು ವಿನಂತಿಸಿದರು.
ಪ್ರಾತಃಕಾಲ 5.30ಕ್ಕೆ ಸುಪ್ರಭಾತ ಸೇವೆ,6.00ಕ್ಕೆ ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರೀ ಮಂತ್ರ ಜಪ, ಪ್ರಾತಃ ಪೂಜೆ,7.00ರಿಂದ 8.00ರವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, 8.00ರಿಂದ 10.00 ರವರೆಗೆನಾಮತ್ರಯ ಮಹಾಮಂತ್ರ ಜಪಯಜ್ಜ,ಮಧ್ಯಾಹ್ನ 12.00ಕ್ಕೆಮಹಾಪೂಜೆ, 1.00ರಿಂದ 3.00ರವರೆಗೆಭಜನಾ ಕಾರ್ಯಕ್ರಮ,3.00ರಿಂದ 4.00ರವರೆಗೆ ವೈದಿಕರಿಂದ ವೇದ ಪಾರಾಯಣ,ಸಂಜೆ 4.00ರಿಂದ – ಪುಷ್ಪಯಾಗ ಆರಂಭ ಅಷ್ಟಾವಧಾನ ಸೇವೆ,ರಾತ್ರಿ 9.00ಕ್ಕೆ – ದೀಪಾರಾಧನೆ, ಮಹಾಪೂಜೆ,10.00ಕ್ಕೆ ಶ್ರೀ ವಿಠೋಭ ದೇವರ ಸನ್ನಿಧಿಯಲ್ಲಿ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಡಿ.30ರಂದು ಸಂಜೆ 4 ಗಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ್ ಶೇಟ್ , ವಿನಾಯಕ ಕೃಷ್ಣ ಶೇಟ್ ಹಾಗೂ ಬಿ. ಸಾಯಿದತ್ತ ಶೇಟ್ ಉಪಸ್ಥಿತರಿದ್ದರು.










