ಮಂಗಳೂರು, ಮಾ. 01 : ಎo.ಸಿ.ಸಿ. ಬ್ಯಾಂಕಿನ ಬೆಳ್ಮಣ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಒಂದೇ ವರ್ಷದಲ್ಲಿ ರೂ.10 ಕೋಟಿ ವ್ಯವಹಾರ ಗುರಿಯನ್ನು ಯಶಸ್ವಿಯಾಗಿ ದಾಟಿದ ಸಾಧನೆಯ ಸಂಭ್ರಮಾಚರಣೆಯು ಶನಿವಾರ, 28ನೇ ಫೆಬ್ರವರಿ 2026 ರಂದು ಬೆಳ್ಮಣ್‌ಶಾಖೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಮೊದಲ ವರ್ಷದೊಳಗೆ ಸಾಧಿಸಲಾದ ರೂ.10 ಕೋಟಿ ಮೈಲಿಗಲ್ಲು ಸಾಮೂಹಿಕ ಪ್ರಯತ್ನ, ದೂರದೃಷ್ಟಿಯ ಯೋಜನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಹಕರ ಅಚಲ ನಂಬಿಕೆಯ ಫಲಿತಾಂಶವಾಗಿದೆ, ಬ್ಯಾಂಕಿನ ಪ್ರಾಥಮಿಕ ಉದ್ದೇಶ ತನ್ನ ಗ್ರಾಹಕರಿಗೆ ತ್ವರಿತ ಮತ್ತು ಪರಿಣಾಮಕಾರಿ ಸೇವೆಯನ್ನು ಒದಗಿಸುವುದು ಎಂದು ಹೇಳಿದರು.
ಗ್ರಾಹಕರ ಬಲವಾದ ಬೆಂಬಲ ಮತ್ತು ನಂಬಿಕೆಯಿಂದಾಗಿ ಶಾಖೆ ಈ ಮೈಲಿಗಲ್ಲು ಸಾಧಿಸಲು ಸಾಧ್ಯವಾಯಿತು, ಡಿಸೆಂಬರ್ ತಿಂಗಳಲ್ಲಿಯೇ ಶಾಖೆಯು ರೂ.10 ಕೋಟಿ ಗಡಿ ತಲುಪಿತ್ತು ಮತ್ತು ಈಗ ರೂ.12 ಕೋಟಿ ಮೈಲಿಗಲ್ಲನ್ನು ದಾಟಿದೆ. ಶಾಖೆಯ ಗ್ರಾಹಕರು ಬ್ಯಾಂಕಿನ ನಿಜವಾದ ಬ್ರಾಂಡ್ ರಾಯಭಾರಿಗಳು ಎಂದು ಬಣ್ಣಿಸಿದರು.
ಒಂದು ವರ್ಷದ ಯಶಸ್ವಿಪೂರ್ಣತೆ ಹಾಗೂ ರೂ 10 ಕೋಟಿಯ ವ್ಯವಹಾರ ಮೈಲಿಗಲ್ಲು ಸಾಧನೆಯನ್ನು ಸಂಕೇತಿಸುವಂತೆ ಅಧ್ಯಕ್ಷರು, ಗಣ್ಯ ಅತಿಥಿಗಳು, ಬೆಳ್ಮಣ್ ಶಾಖೆಯ ಎಲ್ಲಾ ಗ್ರಾಹಕರ ಪರವಾಗಿ ಬೆಳ್ಮಣ್ ಶಾಖೆಯ ಸ್ಥಾಪಕ ಗ್ರಾಹಕರು, ಶಾಖಾ ವ್ಯವಸ್ಥಾಪಕರು ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮವನ್ನು ಹಂಚಿಕೊಂಡರು.
ಬೆಳ್ಮಣ್ ಶಾಖೆಯ ಆರಂಭದಿಂದಲೂ ಬ್ಯಾಂಕಿನ ಮೇಲೆ ಅವರು ತೋರಿದ ವಿಶ್ವಾಸ, ನಂಬಿಕೆ ಮತ್ತು ಮೂಲಭೂತ ಬೆಂಬಲವನ್ನು ಗುರುತಿಸಿ, ಬೆಳ್ಮಣ್ ಶಾಖೆಯ ಎಲ್ಲಾ ಗ್ರಾಹಕರ ಪರವಾಗಿ ಕ್ರತಜ್ಞತಾ ಪೂರ್ವಕವಾಗಿ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಸ್ಥಾಪಕ ಗ್ರಾಹಕರನ್ನು ಸನ್ಮಾನಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ವಂದನೀಯ ಫಾ| ಡೆನಿಸ್ ಡಿಸೋಜ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಶುಭ ಹಾರೈಸಲಾಯಿತು. ಮುಖ್ಯ ಅತಿಥಿಗಳಾಗಿ, ಪರಪ್ಪಾಡಿಯ ಅವರ್ ಲೇಡಿ ಆಫ್ ಪರ್ಪೆಚುಯಲ್ ಸುಕುರ್ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾ| ಡೇನಿಸ್ ಡಿಸೋಜ ಹಾಗೂ ಬೆಳ್ಮಣ್ನ ಸಂತ ಜೋಸೆಫರ ಪ್ರೌಢ ಶಾಲೆಯ ಶಿಕ್ಷಕಿ ಶ್ರೀಮತಿ ಲೈಲಾ ಬಬಿತಾ ನೊರೊನ್ಹಾಉಪಸ್ಥಿತರಿದ್ದರು. ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕಿ ಡಾ| ಫ್ರೀಡಾ ಡಿಸೋಜ, ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜಸ್ ಮತ್ತು ಬೆಳ್ಮಣ್ ಶಾಖಾ ಪ್ರಬಂಧಕಿ ಶ್ರೀಮತಿ ಶೈನಿ ಲಸ್ರಾದೊ ಹಾಜರಿದ್ದರು.
ನಿರ್ದೇಶಕಿ ಡಾ| ಫ್ರೀಡಾ ಡಿಸೋಜಾ ಸ್ವಾಗತಿಸಿ ಶ್ರೀ ಜೇಸನ್ ಪಿರೇರಾ, ಶಿರ್ತಾಡಿ ನಿರೂಪಿಸಿ ವಂದಿಸಿದರು.











