ಬಂಟ್ವಾಳ, ಎ.14 : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಶನಿವಾರ ಸಂಜೆ ಮಹಾರಥೋತ್ಸವ ನೆರವೇರಿತು.
ರಥೋತ್ಸವದ ದಿನ ಬೆಳಗ್ಗೆ ದೇವರಿಗೆ ಪ್ರಾರ್ಥನೆ ನೆರವೇರಿತು. ಮಹಾಪೂಜೆ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ ವಿಶೇಷ ಪೂಜೆ ನಡೆದು ಸಂಜೆ ರಥದಲ್ಲಿ ದೇವರಿಗೆ ಪೂಜೆ ಬಳಿಕ ಗುತ್ತಿನವರು ಹಾಗೂ ಭಕ್ತರು ತೆಂಗಿನಕಾಯಿ ಒಡೆದು, ರಥ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಚೆಂಡಿನ ಗದ್ದೆಗೆ ಎಳೆಯಲಾಯಿತು. ಬಳಿಕ ಸುಡುಮದ್ದು ಪದರ್ಶನ ನಡೆಯಿತು. ಮಹಾರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ದೇಗುಲದ ಪ್ರಧಾನ ಅರ್ಚಕ ಮಾಧವ ಭಟ್, ಹಿರಿಯ ಪ್ರಧಾನ ಅರ್ಚಕರಾದ ಕೆ. ರಾಮ್ ಭಟ್, ಪರಮೇಶ್ವರ ಭಟ್, ಅರ್ಚಕರಾದ ಪದ್ಮನಾಭ ಭಟ್, ಆದರ್ಶ ಭಟ್, ಅನಂತ ಪದ್ಮನಾಭ ಭಟ್, ದೇಗುಲದ ಆಡಳಿತ ಮೊಕ್ತಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊತ್ತೇಸರ ಚೇರಾ ಸೂರ್ಯನಾರಾಯಣ ರಾವ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪಾಡಿ, ವಿವಿಧ ಗುತ್ತಿನವರು, ಕಾರ್ಯನಿರ್ವಹಣಾಧಿಕಾರಿ ಕೆ. ಪಿ. ಚಂದ್ರಮೋಹನ್ ಹಾಗೂ ದೇಗುಲದ ಪ್ರಮುಖರು, ಸಾವಿರ ಸೀಮೆಯ ಭಕ್ತರು ಉಪಸ್ಥಿತರಿದ್ದರು.
ದೇವಸ್ಥಾನದಲ್ಲಿ 29 ದಿನಗಳ ಕಾಲ ಅದ್ಧೂರಿಯಾಗಿ ನಡೆದ ಜಾತ್ರೋತ್ಸವ ಶನಿವಾರ ರಾತ್ರಿ ಸಂಪನ್ನಗೊಂಡಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಕಳೆದೊಂದು ತಿಂಗಳಿಂದ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ದೇವರ ರಥೋತ್ಸವದ ಬಳಿಕ ಜಾತ್ರೆ ಸಂಪನ್ನವಾಗಿದೆ.











