ವಾಷಿಂಗ್ಟನ್, ಸೆ. 07 : ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಮೆಜಾನ್ ಪ್ರೈಮ್ ಏರ್‌ಗೆ ಸೇರಿದ ಕಾರ್ಗೋ ಜೆಟ್‌ವೊಂದು ರನ್‌ವೇಯಿಂದ ಜಾರಿ ಪಾರ್ಕ್ ಮಾಡಲಾಗಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ.
ರವಿವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಬೋಯಿಂಗ್ 767-300 ವಿಮಾನ ಮಿಯಾಮಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ. ವಿಮಾನ ರನ್‌ವೇಯಿಂದ ಜಾರಿ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಬಳಿಕ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ರಕ್ಷಣಾ ತಂಡಗಳು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ, ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ವರದಿಯಾಗಿದೆ.
ಈ ಕಾರ್ಗೋ ವಿಮಾನವು ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಿಂದ ಮಿಯಾಮಿಗೆ ಆಗಮಿಸಿತ್ತು.ಘಟನೆಯ ಕುರಿತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತನಿಖೆ ನಡೆಸುವುದಾಗಿ ತಿಳಿಸಿದೆ. ಮತ್ತೊಂದೆಡೆ, ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಕೂಡ ಅಪಘಾತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುತ್ತಿದೆ.










