ಮಂಗಳೂರು,ಆ. 09 : 2003ರಲ್ಲಿ ಸ್ಥಾಪನೆಯಾದ ತುಳುನಾಟಕ ಕಲಾವಿದರ ಒಕ್ಕೂಟವು 21 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಒಕ್ಕೂಟವು ನಿರಂತರವಾಗಿ ವಾರ್ಷಿಕ ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರು ಹಾಗೂ ತಂತ್ರಜ್ಞರ ಸನ್ಮಾನ, ಅಶಕ್ತ ಕಲಾವಿದರಿಗೆ ಧನಸಹಾಯ ಮತ್ತು ಕೀರ್ತಿಶೇಷ ಕಲಾವಿದರ ‘ನೆಂಪು’ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. 2026-27ನೇ ಸಾಲಿನ ಕಾರ್ಯಕ್ರಮವು ಆ.11ರಂದು ಸಂಜೆ 5 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು,ಆ.11ರಂದು ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಾರ್ಷಿಕ ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರು ಹಾಗೂ ತಂತ್ರಜ್ಞರ ಸನ್ಮಾನ, ಕೀರ್ತಿಶೇಷ ಕಲಾವಿದರ ‘ನೆಂಪು’ ಕಾರ್ಯಕ್ರಮ ಮತ್ತು ಅಶಕ್ತ ಕಲಾವಿದರಿಗೆ ಗೌರವಧನ ವಿತರಣೆ ನಡೆಯಲಿದೆ ಎಂದರು.
ಈ ಸಾಲಿನ ತೌಳವ ಪ್ರಶಸ್ತಿಯನ್ನು ಹಿರಿಯ ನಾಟಕಕಾರ, ನಟ, ಕಲಾ ನಿರ್ದೇಶಕ ಹಾಗೂ ಸಾಹಿತಿ ತಮ್ಮ ಲಕ್ಷ್ಮಣ ಅವರಿಗೆ ಪ್ರದಾನಿಸಲಾಗುವುದು. ಹಿರಿಯ ಕಲಾವಿದರಾದ ತಿಮ್ಮಪ್ಪ ಶೆಟ್ಟಿ ಬೋಳಾರ, ದಿನೇಶ್ ಮಾಸ್ಟರ್ ಬಿಜೈ, , ಉಲ್ಲಾಸ್ ಕದ್ರಿ, ನಾಗೇಶ ಸಾಲಿಯಾನ್ ಕಂಕನಾಡಿ ವಿಶ್ವನಾಥ ಚಿತ್ರಾಪುರ ಹಾಗೂ ಸುಜಾತ ಶಕ್ತಿನಗರ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
‘ನೆಂಪು’ ಕಾರ್ಯಕ್ರಮದಲ್ಲಿ ಕೀರ್ತಿಶೇಷರಾದ ಬಾಬು ಭಟ್ ಶರವು, ದಯಾನಂದ ಶರವು, ವಿ.ಜಿ.ಪಾಲ್ ಹಾಗೂ ಜೆ.ಸೀತಾರಾಮ ಶೆಟ್ಟಿ ಪಚ್ಚನಾಡಿ ಅವರನ್ನು ಸ್ಮರಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಉಮೇಶ್ ಮಿಜಾರ್ ಸಾರಥ್ಯದ ‘ನಮ್ಮ ಕಲಾವಿದೆರ್ ಬೆದ್ರ’ ತಂಡದಿಂದ ‘ವೈರಲ್ ವೈಶಾಲಿ’ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಕೋಶಾಧಿಕಾರಿ ಮೋಹನ್ ಕೊಪ್ಪಲ, ಉಪಾಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಮತ್ತಿತರರು ಉಪಸ್ಥಿತರಿದ್ದರು.











