ಮಂಗಳೂರು,ಆ. 07 : ಅಸೋಸಿಯೇಷನ್ ಆಫ್ ಸದರ್ನ್ ಯುರಾಲಜಿಸ್ಟ್ ವತಿಯಿಂದ ಆಯೋಜಿಸಲಾಗುತ್ತಿರುವ 37ನೇ ವಾರ್ಷಿಕ ಸಮ್ಮೇಳನ ‘SZUSICON 2026’ ಆಗಸ್ಟ್ 7ರಿಂದ 9ರವರೆಗೆ ಮಂಗಳೂರಿನ ಮೇರಿಹಿಲ್‌ನಲ್ಲಿರುವ ಪಾಲೇಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಪ್ರಶಾಂತ್ ಮಾರ್ಲ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವನ್ನು ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಂಗಳೂರು ಯುರಾಲಜಿ ಫೋರಂ ಜಂಟಿಯಾಗಿ ಆಯೋಜಿಸುತ್ತಿವೆ. ಯುರಾಲಜಿ (ಮೂತ್ರಶಾಸ್ತ್ರ) ಕ್ಷೇತ್ರದಲ್ಲಿ ಜ್ಞಾನ ವಿನಿಮಯ, ಸಂಶೋಧನೆ ಹಾಗೂ ಇತ್ತೀಚಿನ ವೈದ್ಯಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಇದು ಪ್ರಮುಖ ಶೈಕ್ಷಣಿಕ ವೇದಿಕೆಯಾಗಲಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಹಿರಿಯ ಯುರಾಲಜಿಸ್ಟ್‌ಗಳು, ಯುರಾಲಜಿ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು, ವೈದ್ಯಕೀಯ ತಜ್ಞರು ಹಾಗೂ ಯುರಾಲಜಿಕಲ್ ಶಸ್ತ್ರಚಿಕಿತ್ಸಾ ಉಪಕರಣಗಳ ತಯಾರಕರು ಮತ್ತು ಪೂರೈಕೆದಾರರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಬಿ.ಎಂ.ಝೀಶಾನ್ ಹಮೀದ್ ಅವರು ಮಾಹಿತಿ ನೀಡಿದರು.
ಸಮ್ಮೇಳನದ ಸಂಘಟನಾ ಖಜಾಂಚಿ ಡಾ.ಪ್ರೀತಮ್ ಶರ್ಮಾ ಅವರು ಮಾತನಾಡಿ , ಉದ್ಘಾಟನಾ ಸಮಾರಂಭವು ಆಗಸ್ಟ್ 7ರಂದು ಶುಕ್ರವಾರ ಸಂಜೆ 5 ಗಂಟೆಗೆ ಪಾಲೇಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಫರೀದ್ ಹಾಗೂ ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಸಮಿತಿ ಸದಸ್ಯರಾದ ಡಾ. ಸುಯೋಗ್ ಶೆಟ್ಟಿ ಉಪಸ್ಥಿತರಿದ್ದರು.











