ಮಂಗಳೂರು, ನ. 04 : ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಾ ಬಂದಿರುವ ಬೆಸೆಂಟ್ ಸಂಧ್ಯಾ ಕಾಲೇಜು ತನ್ನ 50ನೇ ವರ್ಷದ ಸಂಭ್ರಮದಲ್ಲಿದೆ. ಕಾಲೇಜಿನ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭವು ನ.6ರಂದು ಶುಕ್ರವಾರ ಸಂಜೆ 5.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕಿ ಲಲಿತಾ ಜಿ.ಮಲ್ಯ ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಸೆಂಟ್ ಸಂಧ್ಯಾ ಕಾಲೇಜು ಮಂಗಳೂರಿನ ಪ್ರಮುಖ ಸಹಶಿಕ್ಷಣ ಸಂಜೆಯ ಕಾಲೇಜುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆ ನಡೆದು ಬಂದ ಹಾದಿ ಹಾಗೂ ವಿದ್ಯಾರ್ಥಿಗಳ ಯಶಸ್ಸನ್ನು ಸ್ಮರಿಸುವುದರೊಂದಿಗೆ, ಪ್ರಸ್ತುತ ಸಾಧನೆಗಳನ್ನು ಸಂಭ್ರಮಿಸಿ ಮುಂದಿನ ದಿನಗಳ ಹೊಸ ಆಶಯಗಳಿಗೆ ಮುನ್ನುಡಿ ಬರೆಯುವ ಉದ್ದೇಶದಿಂದ ಸುವರ್ಣ ಮಹೋತ್ಸವ ವರ್ಷವನ್ನು ಆಚರಿಸಲಾಗುತ್ತಿದೆ ಎಂದರು.
ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಕಾಲೇಜು ಆಡಳಿತ ಮಂಡಳಿ ಯೋಜನೆ ರೂಪಿಸಿದೆ. ಸುವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಸುಮಂತ್ ರಾವ್, ಚಿಕ್ಕಮಗಳೂರಿನ ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಪ್ರವೀಣ್ ಪೂಜಾರಿ, ಶ್ರೀ ಶಬರಿ ಕ್ಯಾಟರರ್ಸ್ನ ಎಲ್.ಎನ್. ರಾಜೇಶ್ ಶೆಟ್ಟಿ ಶಬರಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಗೌತಮ್ ಪೈ ಡಿ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಪೈ, ಸಂಚಾಲಕಿ ಲಲಿತಾ ಜಿ.ಮಲ್ಯ, ಕಾಲೇಜಿನ ಪ್ರಾಂಶುಪಾಲ ಪ್ರೊ.ಗೋಪಾಲ ರೆಡ್ಡಿ ರಿಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.
ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳು, ಶಿಕ್ಷಣಾಸಕ್ತರು ಕಾಲೇಜಿನ ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಅಣ್ಣಪ್ಪ ನಾಯಕ್ , ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಪೈ, ಕಾಲೇಜಿನ ಪ್ರಾಂಶುಪಾಲ ಪ್ರೊ.ಗೋಪಾಲ ರೆಡ್ಡಿ ರಿಟ್ಟಿ,ದಿಗಂತ್ ಎಸ್.ಪಿ ಮೊದಲಾದವರು ಉಪಸ್ಥಿತರಿದ್ದರು.











