ಮಂಗಳೂರು,ನ.01:ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್, ಪತ್ರಿಕಾಭವನ ಟ್ರಸ್ಟ್ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಭಾಗಿತ್ವದಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗೆ ಅಂಚೆ ವಿಮಾ ಯೋಜನೆಯ ನೋಂದಣಿ ಕಾರ್ಯಕ್ರಮಕ್ಕೆ ಭಾರತೀಯ ಅಂಚೆ ಇಲಾಖೆಯ ಪಾಂಡೇಶ್ವರ ಕೇಂದ್ರದ ಹಿರಿಯ ಅಧಿಕಾರಿ ಲೋಕನಾಥ್ ಚಾಲನೆ ನೀಡಿದರು.
ಬಳಿಕ ಮಾತಾಡಿದ ಅವರು, ಅಂಚೆ ಇಲಾಖೆಯಿಂದ ವಿವಿಧ ಸೇವಾ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಿರುತ್ತವೆ. ಅವುಗಳ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಭಾರತೀಯ ಅಂಚೆ ಇಲಾಖೆಯ ಪಾಂಡೇಶ್ವರ ಕೇಂದ್ರದ ಹಿರಿಯ ಅಧಿಕಾರಿ ಲೋಕನಾಥ್ ಕರೆ ನೀಡಿದರು.
ಅಂಚೆ ಇಲಾಖೆಯ ಮೂಲಕ ಆಧಾರ್ ನೋಂದಣಿ, ತಿದ್ದುಪಡಿ, ವಿಮಾ ಯೋಜನೆಗಳು ವಿವಿಧ ಆರೋಗ್ಯ ವಿಮಾ ಯೋಜನೆಗಳು ಲಭ್ಯವಿರುತ್ತವೆ. ಕಡಿಮೆ ಮೊತ್ತದಲ್ಲಿ ಕನಿಷ್ಠ ದಾಖಲೆಗಳೊಂದಿಗೆ ಹೆಚ್ಚು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರಿಗೆ 10 ಲಕ್ಷ ರೂ. ವರೆಗಿನ ಅಪಘಾತ ವಿಮಾ ಯೋಜನೆ ಉಪಯುಕ್ತ ಯೋಜನೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ವಹಿಸಿದ್ದರು.ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಶ್ರೀನಿವಾಸ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಜಿಲ್ಲಾ ಸಂಘದ ಪೂರ್ವಾಧ್ಯಕ್ಷ ಹರ್ಷ, ಭಾರತೀಯ ಅಂಚೆ ಇಲಾಖೆಯ ಪಾಂಡೇಶ್ವರ ಕೇಂದ್ರದ ನಿರೀಕ್ಷಕ ಪ್ರದೀಪ್ ಭಂಡಾರಿ, ಸಂಘದ ನಿಕಟಪೂರ್ವ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂದೇಶ್ ಜಾರ, ಸಂದೀಪ್ ಕುಮಾರ್ ಎಂ. ಉಪಸ್ಥಿತರಿದ್ದರು.











