ಉಡುಪಿ, ಸೆ.20 : ಕಾಪು ತಾಲೂಕಿನ ಕಟಪಾಡಿ ಸಮೀಪದ ಸುಭಾಷ್ ನಗರದಲ್ಲಿರುವ ತೆಂಗಿನಕಾಯಿ ಸಂಸ್ಕರಣಾ ಹಾಗೂ ಸಂಗ್ರಹ ಘಟಕದಲ್ಲಿ ಶನಿವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಅವಘಡದಲ್ಲಿ ಅಂದಾಜು 10-15 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
ಘಟಕದೊಳಗೆ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ತೆಂಗಿನಕಾಯಿಗಳಿಗೆ ಬೆಂಕಿ ವೇಗವಾಗಿ ವ್ಯಾಪಿಸಿದೆ. ಇದರಿಂದಾಗಿ ದೊಡ್ಡ ಪ್ರಮಾಣದ ತೆಂಗಿನಕಾಯಿಗಳು ಬೆಂಕಿಗೆ ಆಹುತಿಯಾಗಿವೆ.
ಸ್ಥಳೀಯರು ಮಾಹಿತಿ ನೀಡಿದ ಬಳಿಕ ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎರಡು ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಈ ಘಟಕವು ನಳಿನಿ ಪುಷ್ಪಲತಾ ಸಾಲಿಯಾನ್ ಅವರ ಮಾಲೀಕತ್ವದಲ್ಲಿದ್ದು, ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ, ಸುಮಾರು 10 ಲಕ್ಷದಿಂದ 15 ಲಕ್ಷ ಮೌಲ್ಯದ ತೆಂಗಿನಕಾಯಿಗಳು ಬೆಂಕಿಯಿಂದ ಹಾನಿಗೊಳಗಾಗಿರುವ ಸಾಧ್ಯತೆಯಿದೆ. ಆದರೆ, ಒಟ್ಟು ನಷ್ಟದ ನಿಖರ ಪ್ರಮಾಣವನ್ನು ಅಂದಾಜಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ.ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ತನಿಖೆ ನಡೆಯುತ್ತಿದೆ.











