ಮಂಗಳೂರು, ಸೆ.17 : ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಬೇಕೆಂದು ನಮ್ಮ ಕನಸಾಗಿತ್ತು. ಅದು ಈಗ ನಿಜವಾಗಿದೆ. ಕಡಲ ತಡಿಯಲ್ಲಿ ಸಂಪುಟ ಸಭೆ ನಡೆದರೆ ಇಲ್ಲಿನ ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಿದೆ. ಈ ಹಿಂದೆ ಅನೇಕ ಸಂದರ್ಭದಲ್ಲಿ ಇಲ್ಲಿ ಸಚಿವ ಸಂಪುಟ ಸಭೆ ನಡೆಯಬೇಕೆಂದು ಮನವಿಯನ್ನು ಮಾಡಿದ್ದೆ. ಅಂತಿಮವಾಗಿ ಇಂದು ಸಂಪುಟ ಸಭೆ ನಡೆಯುವಲ್ಲಿಗೆ ಬಂದು ನಿಂತಿದೆ ಎಂದು ವಿಧಾನ ಪರಿಷತ್ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಯಲ್ಲಿ ಮಾತಾಡಿದ ಅವರು, ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆ ಕರಾವಳಿ ಅಭಿವೃದ್ಧಿಗೆ ಒತ್ತು ನೀಡಲಿದೆ. ಕರಾವಳಿ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡುಇಟ್ಟುಕೊಂಡು ಸಚಿವ ಸಂಪುಟ ಸಭೆ ನಡೆಯಲಿದೆ. ಅಭಿವೃದ್ಧಿಯ ವಿಚಾರ ಬಂದಾಗ ಇಲ್ಲಿನ ಎಲ್ಲ ಶಾಸಕರು ಸಂಸದರು ಹಾಗೂ ಅಧಿಕಾರಿಗಳು ಪಕ್ಷಬೇಧ ಮರೆತು ಕಾರ್ಯ ನಿರ್ವಹಿಸುತ್ತಾರೆ ಅನ್ನುವುದಕ್ಕೆ ಈ ಸಂಪುಟ ಸಭೆ ಪ್ರಮುಖ ಉದಾಹರಣೆಯಾಗಿದೆ.ಕನ್ವೆನ್ಷನ್ ಸೆಂಟರ್ ಅಭಿವೃದ್ಧಿ, ತಲಪಾಡಿಯಿಂದ ಬೈಂದೂರು ವರೆಗೆ ಕೋಸ್ಟಲ್ ಲೈನ್ ಅಭಿವೃದ್ಧಿ, ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆ, ಉಡುಪಿಯ ಬೆಳಪುವಿನಲ್ಲಿ ಅರ್ಧಕ್ಕೆ ನಿಂತಿರುವ ಈ ಯೋಜನೆಯನ್ನು ಮತ್ತೆ ಪ್ರಾರಂಭಿಸುವುದು, ಮೀನುಗಾರಿಕಾ ಕಾಲೇಜು ಅಭಿವೃದ್ಧಿ, ಉಡುಪಿ ಜಿಲ್ಲೆಯ ಅಜ್ಜರಕಾಡುವಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ, ಮಂಗಳಾ ಕ್ರೀಡಾಂಗಣ ಅಭಿವೃದ್ಧಿ, ಪಿಲಿಕುಳ ಅಭಿವೃದ್ಧಿ, ವಿವಿಧ ತಾಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಾಣ, ಕರಾವಳಿಯಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿಗೆ ತರಬೇತಿ ಕೇಂದ್ರ, ಟೆಂಪಲ್ ಟೂರಿಸಂಗೆ ಪ್ರಾಧಾನ್ಯತೆ, ಕರಾವಳಿಯಲ್ಲಿ ಯಕ್ಷಗಾನ, ಕಂಬಳದ ಜೊತೆಗೆ ವಿವಿಧ ಪರಂಪರೆಯ ಕಲೆಗಳಿಗೆ ಕನಿಷ್ಠ 10 ಕೋಟಿ ರೂ. ಬಜೆಟ್ ಮೀಸಲಿಡುವಂತೆ ಬೇಡಿಕೆಯನ್ನು ಸಲ್ಲಿಸಲಾಗಿದೆ ಎಂದರು.
ಕೊಣಾಜೆಯಿಂದ ಮಣಿಪಾಲದವರೆಗೆ ಮೆಟ್ರೋ ಲೈನ್ ನಿರ್ಮಾಣಕ್ಕೆ ಡಿಪಿಆರ್ ಸಲ್ಲಿಸಲು ಮನವಿ, ಮಂಗಳೂರಿಗೆ ಸಂಪರ್ಕಿಸುವ ಘಾಟ್ ರಸ್ತೆ ಅಭಿವೃದ್ಧಿ, ಸುರಂಗ ರಸ್ತೆ ನಿರ್ಮಾಣ ಕುರಿತು ಈಗಾಗಲೇ ಚರ್ಚಿಸಲಾಗಿದೆ. ಹೋಟೆಲ್ ನಿರ್ಮಾಣ, ಪ್ರವಾಸೋದ್ಯಮಕುರಿತಂತೆ ಈ ಎಲ್ಲ ಯೋಜನೆಗಳ ಕುರಿತು ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ, ಮಾಜಿ ಅಧ್ಯಕ್ಷ ಹರೀಶ್ ಕುಮಾರ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಸುರೇಂದ್ರ ಕಂಬಳಿ, ಲಾರೆನ್ಸ್, ಶುಭೋದಯ ಆಳ್ವ ಮತ್ತಿತರರು ಉಪಸ್ಥಿತರಿದ್ದರು.











