ಮಂಗಳೂರು, ಆ.20 : ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಮಂಗಳೂರಿನ ಕೆ.ಎಸ್.ಹೆಗಡೆ ಮೆಡಿಕಲ್ ಅಕಾಡೆಮಿಯ ಇಎನ್ಟಿ ವಿಭಾಗಗಳ ಜಂಟಿ ಆಶ್ರಯದಲ್ಲಿ ‘SEOCON-2026’ ಅಂತರರಾಷ್ಟ್ರೀಯ ಸಮ್ಮೇಳನ ಆ.20ರಿಂದ 23ರವರೆಗೆ ಮಂಗಳೂರಿನ ಅತ್ತಾವರದಲ್ಲಿರುವ ಅವತಾರ್ ಹೋಟೆಲ್ ಮತ್ತು ಕನ್ವೆನ್ಸನ್ ಸೆಂಟರ್ನಲ್ಲಿ ನಡೆಯಲಿದೆ ಎಂದು ಸಂಘಟನಾ ಅಧ್ಯಕ್ಷ ಡಾ.ದೇವಿಪ್ರಸಾದ್ ಡಿ. ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಎಂಡೋಸ್ಕೋಪಿಕ್ ಓಟೋರಿಗೋಲರಿಂಗೋಲಜಿಸ್ಟ್ ಸೊಸೈಟಿಯ ನಾಲ್ಕನೇ ಅಂತರರಾಷ್ಟ್ರೀಯ ಸಮ್ಮೇಳನವಾಗಿದೆ. ಸಮ್ಮೇಳನದಲ್ಲಿ 400ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 100ಕ್ಕೂ ಅಧಿಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರು ಭಾಗವಹಿಸಲಿದ್ದಾರೆ ಎಂದರು.
ಆ.21ರಂದು ಸಂಜೆ 7ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪದ್ಮಶ್ರೀ ಪುರಸ್ಕೃತ ಖ್ಯಾತ ಇಎನ್ಟಿ ಹಾಗೂ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸಕ ಡಾ.ಮಿಲಿಂದ್ ವಿ. ಕಿರ್ತನೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇಎನ್ಟಿ ಚಿಕಿತ್ಸೆಯ ಬಗ್ಗೆ ಸಂವಾದಗಳು ನಡೆಯಲಿದೆ.ಇ ಎನ್ ಟಿ ಯಲ್ಲಿನ ನಾವೀನ್ಯತೆ, ಹಾಗೂ AI ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಇಎನ್ಟಿ ಉಪನ್ಯಾಸ ಹಾಗೂ ತಜ್ಞರ ಸಂವಾದಗಳು ಸಮ್ಮೇಳನದಲ್ಲಿ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ವಾದೀಶ ಭಟ್ ಉಪಸ್ಥಿತರಿದ್ದರು.











