ಮಂಗಳೂರು, ಜ.09 : ಜಗದ್ಗುರು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ಮಂಗಳೋತ್ಸವ ಜ. 11ಕ್ಕೆ ಮಂಗಳೂರಲ್ಲಿ ನಡೆಯಲಿದೆ ಎಂದು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಿಎ.ಜಗನ್ನಾಥ್ ಕಾಮತ್ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಮಂಗಳೋತ್ಸವದ ಪೂರ್ವಭಾವಿಯಾಗಿ ಜನವರಿ 5ಕ್ಕೆ ಕರ್ನಾಟಕ, ಕೇರಳದಿಂದ ಹೊರೆಕಾಣಿಕಾ ಸೇವಾ ಸಮರ್ಪಣೆ ನಡೆದಿದೆ. ದೇಶದ ವಿವಿಧೆಡೆಗಳಿಂದ ವ್ಯಾಸಧ್ವಜ ಸಂಕೀರ್ತನಾ ಪಾದಯಾತ್ರೆ ಮಂಗಳೂರಿಗೆ ಆಗಮಿಸುತ್ತಿದೆ ಎಂದರು.
ಜನವರಿ 11 ರಂದು ಭಾನುವಾರ ಜನ್ಮಶತಾಬ್ದಿಯ ಮಂಗಳೋತ್ಸವ ನಡೆಯಲಿದ್ದು, ಮಧ್ಯಾಹ್ನ 3.30 ಕ್ಕೆ ಶ್ರೀ ಕಾಶೀಮಠ ಸಂಸ್ಥಾನದ ಕೊಂಚಾಡಿಯಲ್ಲಿರುವ ಶಾಖಾಮಠಕ್ಕೆ ಊರ, ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,ಅಲ್ಲಿಂದ ಭಜನಾ ಸಂಕೀರ್ತನಾ ವ್ಯಾಸಧ್ವಜ ಮತ್ತು ಸ್ವಾಮೀಜಿಯವರ ಪಾದುಕಾ ದಿಗ್ವಿಜಯ ಪಾದಯಾತ್ರೆ ಆರಂಭವಾಗಲಿದೆ. ಪಾದಯಾತ್ರೆಯು ಕೊಂಚಾಡಿಯಿಂದ ಮೇರಿಹಿಲ್, ಯೆಯ್ಯಾಡಿ, ಕೆಪಿಟಿ,ಬಿಜೈ, ಕೆಎಸ್ ಆರ್ ಟಿಸಿ, ಲಾಲ್ ಭಾಗ್, ಎಂ.ಜಿ.ರಸ್ತೆ, ಪಿ.ವಿ.ಎಸ್ ಜಂಕ್ಷನ್ ನಿಂದ ಬಲಕ್ಕೆ ತಿರುಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ ಮೂಲಕ ಕೆನರಾ ಹೈಸ್ಕೂಲ್ ನಲ್ಲಿ ಸೇರಲಿದೆ. ಅಲ್ಲಿ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ದಾರಿಯುದ್ದಕ್ಕೂ ಯೆಯ್ಯಾಡಿ, ಬಿಜೈ, ಲಾಲ್ ಭಾಗ್ ನ ನಿರ್ದಿಷ್ಟ ಜಾಗಗಳಲ್ಲಿ ಪಾನೀಯದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಪಾದಯಾತ್ರೆಯಲ್ಲಿ ವಿವಿಧ ಊರ ಭಜನಾ ಮಂಡಳಿಗಳು ದೇವರ, ಸ್ವಾಮೀಜಿಯವರ ಭಜನೆಯನ್ನು ಹಾಡುತ್ತಾ, ಪಾದಯಾತ್ರೆಯಲ್ಲಿ ಸಾಗಲಿವೆ. ಚೆಂಡೆ, ಬ್ಯಾಂಡ್ ಸೆಟ್, ದೇವರ, ಮಹಾಪುರುಷರ ವೇಷಭೂಷಣಗಳನ್ನು ಧರಿಸಿದ ಮಕ್ಕಳ ಟ್ಯಾಬ್ಲೋಗಳು, ವೇದಘೋಷ, ವಾದ್ಯಗಳೊಂದಿಗೆ ಸ್ವಾಮೀಜಿಯವರ ಭಾವಚಿತ್ರ ಇರುವ ಟ್ಯಾಬ್ಲೋ, ಸ್ವಾಮೀಜಿಯವರ ಪಾದುಕೆ ಇರುವ ಟ್ಯಾಬ್ಲೋ ಸಹಿತ ವಿವಿಧ ಕಲಾಪ್ರಕಾರಗಳು ಪಾದಯಾತ್ರೆಯಲ್ಲಿ ಸಾಗಲಿವೆ.ಪಾದಯಾತ್ರೆಯು ಸಾಗುತ್ತಾ ಡೊಂಗರಕೇರಿ, ನ್ಯೂಚಿತ್ರಾ, ಶ್ರೀನಿವಾಸ ಥಿಯೇಟರ್, ಸ್ವದೇಶಿ ಸ್ಟೋರ್ ತಲುಪಲಿದೆ. ಈ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿ ಇರಲಿದೆ. ಸ್ವದೇಶಿ ಸ್ಟೋರ್ ಬಳಿಯಿಂದ ಸ್ವರ್ಣ ಲಾಲಕಿಯಲ್ಲಿ ದೇವರೊಂದಿಗೆ ಪಾದಯಾತ್ರೆ ಶ್ರೀ ವೆಂಕಟರಮಣ ದೇವಸ್ಥಾನ ತಲುಪಲಿದೆ. ನಂತರ ಅಲ್ಲಿ ಮಂಗಳೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಜನವರಿ 11 ರಂದು ರಾತ್ರಿ 8.30 ರಿಂದ ಮಂಗಳೋತ್ಸವದ ಸಭಾ ಕಾರ್ಯಕ್ರಮದಲ್ಲಿ ಕಾಶೀಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹಿರಿಯ ಯತಿವರೇಣ್ಯರೂ, ಮಹಾತಪಸ್ವಿಗಳಾದ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುಣಗಾನದೊಂದಿಗೆ ಆರ್ಶೀವಚನ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಡಿ.ವೇದವ್ಯಾಸ ಕಾಮತ್, ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಪ್ರಮುಖರಾದ ಕೋಟೇಶ್ವರ ದಿನೇಶ್ ಕಾಮತ್, ರಘುವೀರ್ ಭಂಡಾರಕಾರ್, ವಾಸುದೇವ್ ಕಾಮತ್, ಟಿ. ಗಣಪತಿ ಪೈ, ಪ್ರಶಾಂತ್ ಪೈ ಮತ್ತಿತರರು ಉಪಸ್ಥಿತರಿದ್ದರು.











