ಬೆಂಗಳೂರು,ಜ. 27 : ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ (SJU) ಸಂವಹನ ಮತ್ತು ಮಾಧ್ಯಮ ಅಧ್ಯಯನ ಶಾಲೆಯ (SCMS) ಆಶ್ರಯದಲ್ಲಿ ಹತ್ತನೇ ಆವೃತ್ತಿಯ ‘ಮೀಡಿಯಾಕಾನ್’ ಅಂತರಾಷ್ಟ್ರೀಯ ಸಮ್ಮೇಳನ ಹಾಗೂ ಸಂಘದ ಉತ್ಸವಗಳಿಗೆ ಜ. 23ರ ಶುಕ್ರವಾರದಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ಚಲನಚಿತ್ರ ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಅವರು, ಅಧಿಕಾರ ಮತ್ತು ಪ್ರಬಲ ನಿರೂಪಣೆಗಳ (dominant narratives) ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಕಿವಿಮಾತು ಹೇಳಿದರು. ಜನಪ್ರಿಯತೆ (populism) ಮತ್ತು ಸರ್ವಾಧಿಕಾರತ್ವದಂತಹ ಶಕ್ತಿಗಳು ಇನ್ನು ಮುಂದೆ ಕೇವಲ ರಾಜಕೀಯ ಸಿದ್ಧಾಂತಗಳಾಗಿ ಉಳಿಯದೆ, ದೈನಂದಿನ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಬೌದ್ಧಿಕವಾಗಿ ತಮ್ಮನ್ನು ತಾವು ಸನ್ನದ್ಧರನ್ನಾಗಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮುಂಬರುವ ಸವಾಲುಗಳನ್ನು ಎದುರಿಸಲು ಮತ್ತು ಸಾಮಾಜಿಕ-ರಾಜಕೀಯ ಸಂಕೀರ್ಣತೆಗಳನ್ನು ನಿಭಾಯಿಸಲು ಪ್ರತಿ ನಿಮಿಷವೂ ನಿಮ್ಮ ಕನಸುಗಳನ್ನು ಸಾಕಾರಗೊಳಿಸುವತ್ತ ಮತ್ತು ಮಿದುಳಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಅವರು ಯುವಜನತೆಗೆ ಕರೆ ನೀಡಿದರು.
ವಿಶ್ವವಿದ್ಯಾಲಯದ ಕುಲಪತಿಗಳಾದ ವಂ| ಡಾ. ವಿಕ್ಟರ್ ಲೋಬೋ ಎಸ್‌ಜೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಾಜೀದ್ ಸೈಯದ್, ಎಸ್‌ಸಿಎಂಎಸ್ ಡೀನ್ ಡಾ. ಮೆಲ್ವಿನ್ ಪಿಂಟೋ, ವಿಭಾಗದ ಮುಖ್ಯಸ್ಥ ಡಾ. ಮರುದು ಪಾಂಡಿಯನ್ ಹಾಗೂ ಸಂಯೋಜಕರಾದ ಶಾಬಿನ್ ಪಿ.ಕೆ., ಡಾ. ರೂಪಾ ಪೀಟರ್, ಅಜಯ್ ಚಂದ್ರನ್, ಜೆನಿಲ್ ಜಾರ್ಜ್ ಮತ್ತು ಸುಹಾಸ್ ಶ್ರೀನಿವಾಸ್ ಉಪಸ್ಥಿತರಿದ್ದರು.











