ಮಂಗಳೂರು,ಫೆ.22 : ಫೆ.27ರಂದು ಬಿರ್ದ್ ದ ಕಂಬುಲ “ವೀರಕಂಬಳ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾಕ್ಕೆ ತುಳುನಾಡಿನ ಕಂಬಳ ಪ್ರೇಮಿಗಳು ಬಹಳಷ್ಟು ಬೆಂಬಲ ನೀಡಿದ್ದಾರೆ. ಸಿನಿಮಾಕ್ಕೆ ಕಂಬಳ ಕ್ಷೇತ್ರದ ಅನೇಕ ಸಾಧಕರು ಸಹಾಯ ನೀಡಿದ್ದಾರೆ. ಎಲ್ಲರಿಗೂ ಅಭಿನಂದನೆಗಳು. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡವನ್ನು ಗೆಲ್ಲಿಸಿ ಎಂದು ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಸಿನಿಮಾ ನಿರ್ದೇಶಕ ಡಾ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಮಾತಾಡಿ, ನಾನು 50 ಸಿನಿಮಾಗಳನ್ನು ಎಲ್ಲ ಭಾಷೆಯಲ್ಲೂ ಮಾಡಿದ್ದೆ. ನನಗೆ ಒಮ್ಮೆ ಗುಣಪಾಲ ಕಡಂಬ ಅವರು ಪುತ್ತೂರು ಕಂಬಳಕ್ಕೆ ಕರೆದಿದ್ರು. ಈ ವೇಳೆ ಕಂಬಳ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡ್ಬೇಕು ಅಂತ ಯೋಚನೆ ಬಂತು. ಹೀಗಾಗಿ ಅರುಣ್ ರೈ ಅವರಲ್ಲಿ ಸಿನಿಮಾ ಬಗ್ಗೆ ಹೇಳಿದ್ದೆ. ಅಲ್ಲಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಸಂಪರ್ಕಿಸಿ ಸಿನಿಮಾಕ್ಕೆ ಸಂಭಾಷಣೆ ಬರೆಯಲು ಹೇಳಿದೆವು. ಅಲ್ಲಿಂದ ಶುರುವಾದ ಈ ಸಿನಿಮಾ ಜರ್ನಿ ಈಗ ಬಿಡುಗಡೆಯ ಹಂತಕ್ಕೆ ಬಂದು ಮುಟ್ಟಿದೆ. ಎಲ್ಲರೂ ಸಿನಿಮಾ ನೋಡಿ ಗೆಲ್ಲಿಸಿ ಎಂದರು.
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಡುಗಳನ್ನು ಬಿಡುಗಡೆಗೊಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕಾರಿ ನಿರ್ಮಾಪಕ ರಾಜೇಶ್ ಕುಡ್ಲ, ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್, ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಕೋಶಾಧಿಕಾರಿ ಲೊಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ, ರಾಜೀವ ಶೆಟ್ಟಿ, ಗುಣಪಾಲ ಕಡಂಬ, ಕೆ.ಕೆ.ಪೇಜಾವರ, ಶಶಿರಾಜ್ ಕಾವೂರು, ಮೈಮ್ ರಾಮದಾಸ್ ರಶ್ಮಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.











