ಮಂಗಳೂರು,ಮೇ.30 : ಕರಾವಳಿ ಬ್ರಿಡ್ಜ್ ಅಸೋಸಿಯೇಷನ್ ವತಿಯಿಂದ ‘ಮ್ಯಾವರಿಕ್ಸ್ ಸಮರ್ ನ್ಯಾಷನಲ್ಸ್ 2026’ ಬ್ರಿಡ್ಜ್ ಪಂದ್ಯಾವಳಿಯು ಜೂನ್ 4ರಿಂದ 13ರವರೆಗೆ ನಗರದ ಸೆಂಟ್ ಸೆಬಾಸ್ಟಿಯನ್ ಸೆಂಟೆನರಿ ಸಭಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ಭಾರತೀಯ ಬ್ರಿಡ್ಜ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಬ್ರಿಡ್ಜ್ ಅಸೋಸಿಯೇಷನ್ ತತ್ವಾವಧಾನದಲ್ಲಿ, ಮಂಗಳೂರಿನ ಕರಾವಳಿ ಬ್ರಿಡ್ಜ್ ಅಸೋಸಿಯೇಷನ್ ಆಯೋಜಿಸಿದೆ ಎಂದು ಅಸೋಸಿಯೇಷನ್ ಅಧ್ಯಕ್ಷೆ ಮಾರ್ಜೊರಿ ಟೆಕ್ಸೇರಾ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ದೇಶದ ವಿವಿಧ ಭಾಗಗಳಿಂದ ಹಾಗೂ ಪೋಲೆಂಡ್ ದೇಶದಿಂದ ವಿಶ್ವ ಚಾಂಪಿಯನ್ ಆಟಗಾರರಾದ ಬುರಾಸ್ ಕ್ರಿಸ್ಟೋಫ್ ಜರ್ಜಿ, ಡೊಮಿನಿಕ್ ಫಿಲೋಫೋವಿಚ್ ಜಾಕೋಬ್ ಪಾತೇಹುವಾ ಮತ್ತು ಪ್ಯಾಟ್ರಿಕ್ ಪಾತೇಹುವಾ ಸೇರಿದಂತೆ ಸುಮಾರು 450ಕ್ಕೂ ಅಧಿಕ ಖ್ಯಾತ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಕ್ರೀಡಾಕೂಟವು ಮಂಗಳೂರನ್ನು ಭಾರತದ ಮತ್ತು ವಿಶ್ವದ ಬ್ರಿಡ್ಜ್ ನಕಾಶೆಯಲ್ಲಿ ಗುರುತಿಸುವಂತೆ ಮಾಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಡೆರೆಕ್ ರೇಗೊ ಹಾಗೂ ಸದಸ್ಯ ವಿನ್ಸ್ಟನ್ ಡಿ.ಸೋಜ ಉಪಸ್ಥಿತರಿದ್ದರು.











