ಬ್ರಹ್ಮಾವರ, ಜೂ. 11 : ತಾಯಿಯ ಕಂಕುಳಿನಲ್ಲಿದ್ದ ಮಗುವಿನ ಮೇಲೆ ತೆಂಗಿನ ಮರದಿಂದ ಕಾಯಿ ಬಿದ್ದು ಒಂದೂವರೆ ವರ್ಷದ ಗಂಡು ಮಗು ಸಾವನ್ನಪ್ಪಿದ ಘಟನೆ ಮಂಗಳವಾರ ಬ್ರಹ್ಮಾವರದ ಹೆರಂಜೆಯಲ್ಲಿ ನಡೆದಿದೆ.
ತಾಯಿಯು ಎಂದಿನಂತೆ ದೊಡ್ಡ ಮಗುವನ್ನು ಶಾಲೆಗೆ ಬಿಡಲು ಹೊರಟಿದ್ದರು. ಈ ವೇಳೆ ಸಣ್ಣ ಮಗುವನ್ನು ಕೂಡ ಎತ್ತಿಕೊಂಡು ಸ್ವಲ್ಪ ದೂರ ಸಾಗುವಷ್ಟರಲ್ಲಿ ದಾರಿ ಬದಿಯಲ್ಲಿದ್ದ ತೆಂಗಿನ ತೋಟದಲ್ಲಿದ್ದ ಮರದಿಂದ ಆಕಸ್ಮಿಕವಾಗಿ ತೆಂಗಿನ ಕಾಯಿ ನೇರವಾಗಿ ಮಗುವಿನ ತಲೆಗೆ ಬಿದ್ದಿದೆ. ಕೂಡಲೇ ಸ್ಥಳೀಯರು ಸೇರಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು.
ಮಗುವಿನ ತಲೆಗೆ ಗಂಭೀರ ಏಟು ಆಗಿದ್ದರಿಂದ ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಬ್ರಹ್ಮಾವರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.










