ಮಂಗಳೂರು, ಜೂ.15: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ ಸಿಎ) ವತಿಯಿಂದ ನಡೆಯುವ ಪ್ರೀಮಿಯರ್ ಟಿ-20 ಕ್ರಿಕೆಟ್ ಪಂದ್ಯಾಟ ‘ಮಹಾರಾಜ ಟ್ರೋಫಿ-2026’ ಇದರಲ್ಲಿ ಪಾಲ್ಗೊಳ್ಳುವ ಕೋಸ್ಟಲ್ ಕಿಂಗ್ಸ್ ಮಂಗಳೂರು ಕ್ರಿಕೆಟ್ ತಂಡದ ಜೆರ್ಸಿ ಮತ್ತು ತಂಡದ ಗೀತೆ ಬಿಡುಗಡೆ ಕಾರ್ಯಕ್ರಮವು ಕೆಎಸ್ ಸಿಎ ಆಶ್ರಯದಲ್ಲಿ ಭಾನುವಾರ ನಗರದ ಹೋಟೆಲ್ ಸಭಾಂಗಣವೊಂದರಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೋಸ್ಟಲ್ ಕಿಂಗ್ಸ್ ಮಂಗಳೂರು ಕ್ರಿಕೆಟ್ ತಂಡದ ನಾಯಕನಾಗಿ ಕರುಣ್ ನಾಯರ್ ಮತ್ತು ಉಪನಾಯಕನಾಗಿ ಶ್ರೇಯಸ್ ಗೋಪಾಲ್‌ನ್ನು ಆಯ್ಕೆ ಮಾಡಲಾಯಿತು.
ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ಮಾಲಕತ್ವವನ್ನು ಮಾನ್ಯತಾ ಡೆವಲಪರ್ ಪಡೆದುಕೊಂಡಿದೆ.ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯತಾ ಡೆವಲಪರ್ಸ್ ಮಾಲೀಕ ವಿನೋದ್ ನಾಯ್ಡು ಇದು ಕರಾವಳಿಯನ್ನು ಪ್ರತಿನಿಧಿಸುವ ತಂಡ ಆದ್ದರಿಂದ ಈ ತಂಡಕ್ಕೆ ಕೋಸ್ಟಲ್ ಕಿಂಗ್ಸ್ ಎಂದು ಹೆಸರು ಇಡಲಾಗಿದೆ ಎಂದರು.
ಕೆಎಸ್ ಸಿಎ ವತಿಯಿಂದ ಜೂನ್ ಮತ್ತು ಜುಲೈನಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಮೈದಾನಗಳಲ್ಲಿ ಪಂದ್ಯಾಟಗಳು ನಡೆಯಲಿದೆ. ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಮಂಗಳೂರು ವಲಯದ ಅಧ್ಯಕ್ಷ ಡಾ. ಶ್ರೀಕಾಂತ್ ರೈ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆಎಸ್ ಸಿಎ ಕೋಶಾಧಿಕಾರಿ ಬಿ.ಎನ್.ಮಧುಕರ್, ಕೆಎಸ್ಎ ಸದಸ್ಯ ಅವಿನಾಶ್ ವೈದ್ಯ, ಮಾನ್ಯತಾ ಡೆವಲಪರ್ನ ನಿರ್ದೇಶಕ, ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ಮಾಲಕ ವಿನೋದ್ ನಾಯ್ಡು, ನಟ ರೂಪೇಶ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ಶರ್ಮಿಳಾ ಸ್ವಾಗತಿಸಿ, ನಿರೂಪಿಸಿದರು.











