ಮಂಗಳೂರು,ಜೂ. 20 : ಕಲ್ಕೂರ ಪ್ರತಿಷ್ಠಾನ, ಮಂಗಳೂರು, ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಸಮೃದ್ಧ ಫಲಗಳಾದ ಮಾವು – ಹಲಸು ಮೇಳ ಜೂ. 20 ಶನಿವಾರ ಹಾಗೂ 21 ಆದಿತ್ಯವಾರದಂದು 2 ದಿನಗಳ ಕಾಲ ಮುಂಜಾನೆ 7ರಿಂದ ಸಂಜೆ 7ರ ವರೆಗೆ ಕದ್ರಿ ಕಂಬಳ, ಮಲ್ಲಿಕಾ ಬಡಾವಣೆಯಲ್ಲಿರುವ “ಮಂಜು ಪ್ರಸಾದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರಂಭದ ದಿನ ಸಭಾಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಶ್ರೀ ಶ್ರೀ ಜಿತಕಾಮಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲನೆ ಮಾಡಲಿರುವರು. ಡಾ| ಎಂ.ಬಿ. ಪುರಾಣಿಕ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಪ್ರಸಿದ್ಧ ವೈದ್ಯ ಡಾ. ಜೀವರಾಜ ಸೊರಕೆಯವರು ಉದ್ಘಾಟನೆ ಮಾಡಲಿದ್ದು, ಶಾಸಕರಾದ ಡಿ. ವೇದವ್ಯಾಸ ಕಾಮತ್ ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಿರುವರು ಎಂದರು.
ಎರಡನೇ ದಿನದ ಕಾರ್ಯಕ್ರಮದ ಅಂಗವಾಗಿ ಯೋಗ ಸಾವಯವ ಆಹಾರ ಆರೋಗ್ಯ ಭಾಗ್ಯ ಶೀರ್ಷಿಕೆಯೊಂದಿಗೆ ಅದಮಾರು ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಯೋಗ ಸಾವಯವ ಆಹಾರ ಜಾಗೃತ ಸಂದೇಶ ನೀಡಲಿರುವರು. ಹಲಸು,ಮಾವು ಆಹಾರ ಸೇವನೆ ವೈಜ್ಞಾನಿಕ ವಿಶ್ಲೇಷಣೆ ಉಪನ್ಯಾಸವನ್ನು ಪಡುಬಿದ್ರೆಯ ಆಯುರ್ವೇದ ವೈದ್ಯ, ಪಾರಂಪರಿಕ ನಾಟಿ ತಜ್ಞರಾದ ಡಾ.ಎನ್.ಟಿ. ಅಂಚನ್ ನೀಡಲಿರುವರು ಎಂದು ಹೇಳಿದರು.
ಆರೋಗ್ಯ ಸಚಿವರಾದ ಯು. ಟಿ. ಖಾದರ್, ಮಂಗಳೂರಿನ ಸಂಸದರಾದ ಕ್ಯಾ| ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಶಾಸಕರಾದ ಡಾ| ವೈ. ಭರತ್ ಶೆಟ್ಟಿ, ಸ್ವದೇಶಿ ಗೋವುಗಳ ಹಾಗೂ ಪ್ರಾದೇಶಿಕ ಸಸ್ಯಗಳ ತಳಿ ಸಂರಕ್ಷರು, ಪರಿಸರ ತಜ್ಞರಾದ ಡಾ। ಮನೋಹರ್ ಉಪಾಧ್ಯಾಯ, ಸಾವಯವ ಕೃಷಿಕ ಬಳಗದ ಅಧ್ಯಕ್ಷರಾದ ಜಿ. ಆರ್. ಪ್ರಸಾದ್, ಶಕೀಲಾ ಖಾವ, ಮನೋಹರ್ ಶೆಟ್ಟಿ ಇದ್ದು ಪ್ರಧಾನ ಅಭ್ಯಾಗತರಾಗಿ ಡಾ| ಎ.ಜೆ. ಶೆಟ್ಟಿ, ಡಾ| ಹರಿಕೃಷ್ಣ ಪುನರೂರು, ರಘುನಾಥ ಸೋಮಯಾಜಿ, ಪ್ರಕಾಶ್ ಕಲ್ಬಾವಿ, ಜಿತೇಂದ್ರ ಕೊಟ್ಟಾರಿ, ಡಾ.ಎಂ.ಪಿ. ಶ್ರೀನಾಥ್, ಎಂ.ಎಸ್.ಗುರುರಾಜ್, ನೀಲಾವರ ಸುರೇಂದ್ರ ಅಡಿಗ, ಶಶಿಧರ ಹೆಗಡೆ, ಡಾ.ಜಯಪ್ರಕಾಶ ತೊಟ್ಟೆತ್ತೋಡಿ, ಭಾಸ್ಕರ ಮೊಲಿ, ಕ್ಯಾ.ಗಣೇಶ್ ಕಾರ್ಣಿಕ್, ರತ್ನಾಕರ ಜೈನ್, ಎ.ಆರ್ು.ಸುಬ್ಬಯ್ಯಕಟ್ಟೆ, ಪುಷ್ಪರಾಜ್ ಶೆಟ್ಟಿ, ಶ್ರೀನಿವಾಸ್ ನಾಯಕ್, ಪಿ.ಬಿ.ಹರೀಶ್ ರೈ, ಮಿಥುನ್ ರೈ, ಜಯಾನಂದ ಅಂಚನ್, ಸುಧೀರ್ ಶೆಟ್ಟಿ ಕಣ್ಣೂರ್, ಮನೋಜ್ ಕುಮಾರ್, ಪ್ರೇಮಾನಂದ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ ಮತ್ತಿತರರು ಉಪಸ್ಥಿತರಿರುವರು ಎಂದರು.
ಈ ಮಾವು-ಹಲಸು ಮೇಳದಲ್ಲಿ ರಾಮನಗರ, ಮಂಡ್ಯ, ಮೈಸೂರು, ಬೆಳಗಾಂ ಹಾಗೂ ಸ್ಥಳೀಯ ಸ್ಥಳೀಯ ಕೃಷಿಕರು ಭಾಗವಹಿಸುತ್ತಿದ್ದು, ವಿವಿಧ ತಳಿಯ ಹಲಸು ರುದ್ರಾಕ್ಷ, ಚಂದ್ರಬರ್ಕೆ ಇತ್ಯಾದಿ ಅಲ್ಲದೆ ಮಾವಿನ ಹಣ್ಣುಗಳಾದ ಮಲ್ಲಿಕಾ, ಮಲ್ಲೋವ, ನೀಲಂ, ಕಾಳಪಾಡಿ, ಬಾದಾಮಿ, ತೋತಾಪುರಿ ಇತ್ಯಾದಿ ಹಣ್ಣುಗಳು ಲಭ್ಯವಿರುತ್ತದೆ. ಮಾವು ಹಲಸಿನಿಂದ ತಯಾರಿಸಿದ ಮೌಲ್ಯವರ್ಧಿತ ಸ್ವಾವಲಂಬಿ ಖಾದ್ಯಗಳಾದ ಹಲಸಿನ ಕಬಾಬ್, ಉಪ್ಪಿನಕಾಯಿ, ಹಲಸಿನ ಗಾರಿಗೆ, ಚಿಪ್ಸ್, ಉಂಡ್ಯಕ್ಕ, ಹಲಸಿನ ಪಾವುಬಾಜಿ, ಕಡುಬು, ಹಲಸಿನ ಕೇಕ್, ಹೋಳಿಗೆ, ಹಪ್ಪಳ, ಐಸ್ ಕ್ರೀಂ ಇತ್ಯಾದಿಗಳಲ್ಲದೆ, ವಿವಿಧ ತಾವರೆ ಹೂ ಮತ್ತು ಜಲಸಸ್ಯಗಳು,ತರಕಾರಿ ಬೀಜಗಳು,ಮಾವು ಹಲಸಿನ ಗಿಡಗಳು, ಸಸಿಗಳು, ದೇಸಿ ತರಕಾರಿ ಬೀಜಗಳು, ಕೃಷಿಗೆ ಸಂಬಂಧಿಸಿದ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳು ಲಭ್ಯವಿರಲಿವೆ ಎಂದು ಹೇಳಿದರು.
2 ದಿನಗಳ ಕಾಲ ಬೆಳಿಗ್ಗೆ 8ರಿಂದ ಸಂಜೆ 7ರತನಕ ವಾಧಿರಾಜ ಮಂಟಪದ ಪೇಜಾವರ ವಿಶ್ವೇಶತೀರ್ಥ ವೇದಿಕೆಯಲ್ಲಿ ಸಾಂಸ್ಕೃತಿಕ ಪ್ರತಿಭಾನ್ವಿತರಿಂದ ಸೇವಾರ್ಥವಾಗಿ ಗಮಕ, ಸಂಗೀತ, ಯಕ್ಷ ಸಂಗೀತ, ಹರಿಕಥೆ, ಭಜನೆ, ಗಾನ ಸಂಭ್ರಮ, ತಾಳಮದ್ದಳೆ, ಮಿಮಿಕ್ರಿ, ವಾದ್ಯ ಸಂಗೀತ, ಪರಿಸರ ಗೀತೆ ಅನಾವರಣಗೊಳ್ಳಲಿದೆ. ವಿದ್ಯಾರ್ಥಿ ಪ್ರತಿಭೆಗಳಿಗೆ ಪೂರ್ಣಿಮಾ ರಾವ್ ಪೇಜಾವರ, ಸುಧಾಕರ ರಾವ್ ಪೇಜಾವರ, ದಯಾನಂದ ಕಟೀಲು, ಜನಾರ್ದನ ಹಂದೆ, ಶಿವಪ್ರಸಾದ್ ಪ್ರಭು ಇವರ ಮಾರ್ಗದರ್ಶನದಲ್ಲಿ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುಧಾಕರ ರಾವ್ ಪೇಜಾವರ, ಜನಾರ್ದನ, ಶಿವಪ್ರಸಾದ್, ದಯಾನಂದ ಕಟೀಲ್, ಪ್ರಭು, ಮತ್ತಿತರರು ಉಪಸ್ಥಿತರಿದ್ದರು.











