ಚಿಕ್ಕಬಳ್ಳಾಪುರ, ಜು. 10 : ಪೆಟ್ರೋಲ್ ಟ್ಯಾಂಕರ್ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ 11ನೇ ಮೈಲಿ ಸಮೀಪ ನಡೆದಿದೆ. ಬೆಂಕಿಯು ಸಮೀಪದಲ್ಲಿದ್ದ ಮತ್ತೊಂದು ಹಾಲಿನ ಟ್ಯಾಂಕರ್ ಗೂ ವ್ಯಾಪಿಸಿದೆ.
ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎಂದು ಪ್ರಾಥಮಿಕವಾಗಿ ಹೇಳಲಾಗುತ್ತಿದೆ. ಪೆಟ್ರೋಲ್ ಟ್ಯಾಂಕರ್ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಗೆ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದೆ. ಇದೇ ವೇಳೆ ಸಮೀಪದಲ್ಲಿ ರಿವರ್ಸ್ ತೆಗೆಯುತ್ತಿದ್ದ ಹಾಲಿನ ಟ್ಯಾಂಕರ್ ಗೂ ಬೆಂಕಿ ವ್ಯಾಪಿಸಿದ್ದು, ಎರಡೂ ವಾಹನಗಳು ಹೊತ್ತಿ ಉರಿದಿವೆ. ಎರಡೂ ಲಾರಿಗಳ ಚಾಲಕರು ವಾಹನಗಳಿಂದ ಹೊರಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.











