ಮಂಗಳೂರು, ನ. 21: ಮೇರಿಹಿಲ್ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ ವತಿಯಿಂದ ನವೆಂಬರ್ 28 ಮತ್ತು 29ರಂದು ಎರಡು ದಿನಗಳ ‘ಎಂಸಿಸಿಎಸ್ ಫೆಸ್ಟೆಂಬರ್ 2ಕೆ26’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಮೆಲಿಸ್ಸಾ ಅವರು ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2 ದಿನಗಳ ಉತ್ಸವದಲ್ಲಿ ವೈವಿಧ್ಯಮಯ ಆಹಾರ ಮಳಿಗೆಗಳೊಂದಿಗೆ ಆಹಾರ ಉತ್ಸವ, ಅದೃಷ್ಟದ ಆಟಗಳು, ಬೀಟ್ ಬ್ಯಾಟಲ್ ಹೆಸರಿನ ಡಿಜೆ ಕಾರ್ಯಕ್ರಮ, ಕರಾವಳಿಯ ತುಳು ಸಂಸ್ಕೃತಿಯನ್ನು ಬಿಂಬಿಸುವ ‘ಕರಾವಳಿ ಕಲಾಸಿರಿ’ ಸಾಂಸ್ಕೃತಿಕ ಪ್ರದರ್ಶನ, ಪೆಟ್ ಶೋ, ಲೈವ್ ಮ್ಯೂಸಿಕ್ ಬ್ಯಾಂಡ್, ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯಗಳನ್ನೊಳಗೊಂಡ ‘ನೃತ್ಯ ನೋವಾ’ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಇದರೊಂದಿಗೆ ಕುಟುಂಬದ ಸದಸ್ಯರ ನಡುವಿನ ಬಾಂಧವ್ಯ ಮತ್ತು ಒಗ್ಗಟ್ಟನ್ನು ಸಾರುವ ‘ಫ್ಯಾಮ್ ಫ್ರೆಂಜಿ’, ವಿಶೇಷವಾಗಿ ತಾಯಂದಿರಿಗಾಗಿ ಆಯೋಜಿಸಿರುವ ‘ರೇಡಿಯನ್ಸ್’ ಫ್ಯಾಷನ್ ವಾಕ್, 3ಎ ಸೈಡ್ ಫುಟ್ಬಾಲ್ ಹಾಗೂ ಪಿಕಲ್ಬಾಲ್ ಪಂದ್ಯಾವಳಿಗಳು ನಡೆಯಲಿವೆ ಎಂದರು.
ನವೆಂಬರ್ 28ರಂದು ಮಧ್ಯಾಹ್ನ 3.30ರಿಂದ ರಾತ್ರಿ 9 ಗಂಟೆಯವರೆಗೆ ಹಾಗೂ ನವೆಂಬರ್ 29ರಂದು ಬೆಳಗ್ಗೆ 11ರಿಂದ ರಾತ್ರಿ 9.30ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಹಿತೈಷಿಗಳು ಸೇರಿದಂತೆ ಸಾರ್ವಜನಿಕರು ಈ ಉತ್ಸವದಲ್ಲಿ ಪಾಲ್ಗೊಳ್ಳಬಹುದಾಗಿದೆ. ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಪ್ರಾಂಶುಪಾಲೆ ತಿಳಿಸಿದರು.
ಶಾಲೆಯ ಆವರಣದಲ್ಲಿ ಈಜುಕೊಳ ನಿರ್ಮಿಸುವ ಯೋಜನೆಗೆ ಆರ್ಥಿಕ ನೆರವು ಸಂಗ್ರಹಿಸುವ ಉದ್ದೇಶದಿಂದ ಈ ವಿಶೇಷ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಿಗೆ ಮನರಂಜನೆಯ ಜೊತೆಗೆ ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವ ರೀತಿಯಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ ಪಿಟಿಎ ಉಪಾಧ್ಯಕ್ಷ ಸುಜಯ್ ಡಿಸಿಲ್ವಾ, ಜಂಟಿ ಕಾರ್ಯದರ್ಶಿ ಮೆರ್ಲಿನ್ ಪಿರೇರಾ, ಸದಸ್ಯ ವಿಲಿಯಂ ರೆಬೆಲ್ಲೋ,ಶಾಲಾ ಸಿಬ್ಬಂದಿ ಶೈಲಾ ಕ್ರಾಸ್ತ ಉಪಸ್ಥಿತರಿದ್ದರು.











