ಬಂಟ್ವಾಳ, ಜು. 16 : ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಕಾರ್ಮಿಕನೋರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳ ನಗರದ ಸಮೀಪದ ದೇವಸ್ಯಪಡೂರು ಗ್ರಾಮದ ಅಲ್ಲಿಪಾದೆ ಬಳಿಯ ಅತ್ತಳಿಕೆ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಕಾವಳಪಡೂರು ನಿವಾಸಿ ಪ್ರಮೋದ್ (42) ಎಂದು ಗುರುತಿಸಲಾಗಿದೆ. ಲಾರಿ ಚಾಲಕ ಸುನಿಲ್ ಮತ್ತು ಇನ್ನೊಬ್ಬಕಾರ್ಮಿಕ ಕೃಷ್ಣಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಲ್ಲಿನ ಕೋರೆಯಿಂದ ಕೆಂಪುಕಲ್ಲು ತುಂಬಿಸಿಕೊಂಡು ಬರುತ್ತಿದ್ದ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಇದರ ಪರಿಣಾಮ ಕಾರ್ಮಿಕನೋರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಂಟ್ವಾಳ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.











