ಮೂಡುಬಿದಿರೆ, ಜು. 22 : ಮೂಡುಬಿದಿರೆ ಪಟ್ಟಣದ ರತನ್ ಗ್ಯಾರೇಜ್ ಬಳಿ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿವೃತ್ತ ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ವೇಣುಗೋಪಾಲ್ ಕಾಲೋನಿಯ ನಿವಾಸಿ ಗೋಪಾಲ್ ಕೃಷ್ಣ ಭಟ್ (ಜಿ.ಕೆ. ಭಟ್) ಎಂದು ಗುರುತಿಸಲಾಗಿದೆ.
ಗೋಪಾಲ್ ಕೃಷ್ಣ ಭಟ್ ಅವರು ಸಂಜೆ ಮನೆಯಿಂದ ಮೂಡುಬಿದಿರೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ. ಪೇಟೆಯ ರತನ್ ಗ್ಯಾರೇಜ್ ಎದುರಿನ ರಸ್ತೆಯಲ್ಲಿ ಬರುತ್ತಿದ್ದ ಆಟೋ ರಿಕ್ಷಾ ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ಬಂದ ಬೈಕನ್ನು ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿಯಾಗಿದೆ. ರಿಕ್ಷಾದ ಅಡಿಗೆ ಸಿಲುಕಿದ ಗೋಪಾಲ್ ಕೃಷ್ಣ ಭಟ್ ಅವರು ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.











