ಬಂಟ್ವಾಳ,ಜು. 23 : ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಮರ ಬಿದ್ದು ಯುಕೆಜಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಮಾಣಿ ಸಮೀಪದ ಬರಿಮಾರು ಗ್ರಾಮದ ಕಲ್ಲೆಟ್ಟಿ ಎಂಬಲ್ಲಿ ಬುಧವಾರ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಕಲ್ಲಡ್ಕದ ಶ್ರೀ ರಾಮ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಪೆರ್ನೆ ನಿವಾಸಿ ಚಂದ್ರಶೇಖರ್ ಅವರ ಪುತ್ರಿ ಚಿರನ್ವಿ (5) ಎಂದು ಗುರುತಿಸಲಾಗಿದೆ.
ಕಲ್ಲಡ್ಕ ಶ್ರೀ ರಾಮ ಶಾಲೆಗೆ ಸೇರಿದ ಬಸ್ ಬುಧವಾರ ಸಂಜೆ ಶಾಲೆಯ ಮಕ್ಕಳನ್ನು ಬಿಡಲು ತೆರಳಿದ ವೇಳೆ ಬರಿಮಾರು ಗ್ರಾಮದ ಕಲ್ಲೆಟ್ಟಿ ಎಂಬಲ್ಲಿ ಮರವೊಂದು ಬಸ್ಸಿನ ಮೇಲೆ ಬಿದ್ದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟಿದ್ದು,ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆ ನಡೆದ ಕೂಡಲೇ ಸ್ಥಳೀಯರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸ್ಪಂದಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ತೀವ್ರ ಮಳೆ ಗಾಳಿಯ ಪ್ರಭಾವದಿಂದಾಗಿ ಮರ ಉರುಳಿ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.











