ಕಠ್ಮಂಡು, ಆ. 30 : ನೇಪಾಳ-ಚೀನಾ ಗಡಿಯ ಸಮೀಪದ ಹಿಮನದಿ ಕುಸಿದು ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 626ಕ್ಕೆ ಏರಿಕೆಯಾಗಿದೆ. ಈಗಾಗಲೇ 4,400ಕ್ಕೂ ಹೆಚ್ಚಿನ ಜನರನ್ನು ರಕ್ಷಿಸಲಾಗಿದ್ದು, 2,400ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಹಿಮನದಿ ಕುಸಿದು ಲ್ಹೆಂಡೆ ಖೋಲಾ ನದಿಗೆ ಭಾರಿ ಪ್ರಮಾಣದ ಮಂಜುಗಡ್ಡೆ, ಬಂಡೆಗಳು ಹರಿದು ಬಂದು ಭೋಟೆ ಕೋಶಿ ನದಿಗೆ ನೀರು ನುಗ್ಗಿದೆ. ಇದರ ಪರಿಣಾಮ ರಸುವಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಹಾನಿಯುಂಟಾಗಿದೆ.ಪ್ರವಾಹದಿಂದಾಗಿ ಇದುವರೆಗೆ 626 ಜನರು ಸಾವನ್ನಪ್ಪಿದ್ದಾರೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿರುವ ಹಿನ್ನೆಲೆ, ನೇಪಾಳ ಸರ್ಕಾರದ ಮನವಿಯ ಮೇರೆಗೆ ವೈದ್ಯಕೀಯ ಸಿಬ್ಬಂದಿ ಮತ್ತು ಸುರಂಗ ರಕ್ಷಣಾ ತಜ್ಞರನ್ನು ಒಳಗೊಂಡ 11 ಸದಸ್ಯರ ಭಾರತೀಯ ತಂಡವು ಶನಿವಾರ ನೇಪಾಳಕ್ಕೆ ತಲುಪಿದೆ.











