ಮಂಗಳೂರು,ಅ.15 : ಅಶಕ್ತರಿಗೆ ನೆರವು, ಸಮಾಜಮುಖಿ ಸೇವಾ ಕಾರ್ಯಗಳ ಉದ್ಘಾಟನೆ ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ ಕಾರ್ಯಕ್ರಮವು ಗುರುವಾರ ಎಸ್ಸಿಡಿಸಿಸಿ ಬ್ಯಾಂಕ್ನ ಸಭಾಂಗಣದಲ್ಲಿ ನಡೆಯಿತು.
ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯಕ್ಕೆ ಶುಭ ಹಾರೈಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.ಪೇಜಾವರ ಶ್ರೀಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಪೇಜಾವರ ಶ್ರೀಗಳು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯಕ್ಕೆ ಶುಭ ಹಾರೈಸಿದರು.
ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ದೇವರ ಆಶೀರ್ವಾದ ಹಾಗೂ ಜನರ ಪ್ರೀತಿಯಿಂದ ಗುಣಮುಖನಾಗಿ ಮರಳಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಜಿಲ್ಲೆಯಲ್ಲಿ ಮುಜರಾಯಿ ಮತ್ತು ಮುಜರಾಯಿಯೇತರ ದೇವಸ್ಥಾನಗಳು ಸೇರಿದಂತೆ ಅನೇಕ ದೇವಸ್ಥಾನಗಳಿವೆ. ದೇವಸ್ಥಾನಗಳಲ್ಲಿ ಭಕ್ತರು ದೇವರಿಗೆ ಅರ್ಪಿಸಿದ ಹೂವುಗಳನ್ನು ಕಸವಾಗಿ ಪರಿಗಣಿಸದೆ, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಹೂವುಗಳನ್ನು ಸಂಗ್ರಹಿಸಿ ಅಗರಬತ್ತಿ, ಧೂಪ ಹಾಗೂ ಸುಗಂಧ ದ್ರವ್ಯಗಳಂತಹ ಉತ್ಪನ್ನಗಳನ್ನು ತಯಾರಿಸುವ ಯೋಜನೆಗೆ ಬ್ಯಾಂಕ್ ನೀಡಿರುವ ವಾಹನವನ್ನು ಬಳಸಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಭಾಸ್ಕರ್ ಹೆಗ್ಡೆ ,ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಿನಾಥ್ ಭಟ್, ಕೆಎಂಎಫ್ ನಿರ್ದೇಶಕ ರವಿರಾಜ್ ಹೆಗ್ಡೆ, ಸೇರಿದಂತೆ ಹಲವು ಗಣ್ಯರು ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು.











