ಮಂಗಳೂರು, ಅ.18 :ಪಿಲಿನಲಿಕೆ ಪ್ರತಿಷ್ಠಾನ ಮಂಗಳೂರು ಮತ್ತು ನಮ್ಮ ಟಿವಿ ಸಹಯೋಗದಲ್ಲಿ ‘ಪಿಲಿ ನಲಿಕೆ -11’ ಮಂಗಳೂರಿನ ಮಂಗಳಾ ಕ್ರೀಡಾಂಗಣ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಅ.20 ರಂದು ಬೆಳಗ್ಗೆ 10ರಿಂದ ನಡೆಯಲಿದೆ ಎಂದು ಮಂಗಳೂರು ಪಿಲಿನಲಿಕೆ ಪ್ರತಿಷ್ಠಾನ ಅಧ್ಯಕ್ಷ ಮಿಥುನ್ ರೈ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಲಿನಲಿಕೆ -11 ಸ್ಪರ್ಧಾಕೂಟವನ್ನು ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು ಉದ್ಘಾಟಿಸುವರು. ಸ್ಪರ್ಧಾಕಣದಲ್ಲಿ ಆಹ್ವಾನಿತ 9 ತಂಡಗಳಾದ ವೈದ್ಯನಾಥ ಫ್ರೆಂಡ್ಸ್, ಎಂಜಿಟಿ ಮುಳಿಹಿತ್ತು, ಟ್ಯಾಲೆಂಟ್ ಟೈಗರ್ಸ್, ಜೂನಿಯರ್ ಬಾಯ್ಸ್ ಚಿಲಿಂಬಿ, ಫ್ರೆಂಡ್ಸ್ ಬಪ್ಪಾಲ್, ವೈಎಫ್ಸಿ ಎಮ್ಮೆಕೆರೆ, ಗೋರಕ್ಷನಾಥ ಹುಲಿ ಜೆಪ್ಪು, ಎಸ್ಎಫ್ಸಿ ಸೋಮೇಶ್ವರ, ಪೊಳಲಿ ಟೈಗರ್ಸ್ ಭಾಗವಹಿಸಲಿವೆ ಎಂದರು.
ವಿಜೇತರಿಗೆ ಪ್ರಥಮ 10 ಲಕ್ಷ ರೂ., ದ್ವಿತೀಯ ಐದು ಲಕ್ಷ ರೂ., ತೃತೀಯ ಮೂರು ಲಕ್ಷ ರೂ. ಮತ್ತು ಫಲಕ, ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ ಹಾರಿಸುವುದು, ತಾಸೆ, ಬಣ್ಣಗಾರಿಕೆ, ಅತ್ಯುತ್ತಮ ಹುಲಿ ಕುಣಿತಕ್ಕೆ ತಲಾ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲ ತಂಡಗಳಿಗೆ ತಲಾ 50 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿಯ ಪಿಲಿನಲಿಕೆಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಬಾಕ್ಸರ್ ವಿಜೇಂದರ್ ಸಿಂಗ್, ಕನ್ನಡ ಮತ್ತು ತುಳು ಚಿತ್ರನಟರು, ದ.ಕ. ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಶಿವಶರಣ್ ಶೆಟ್ಟಿ, ವಿಕಾಸ್ ಶೆಟ್ಟಿ, ಅವಿನಾಶ್ ಸುವರ್ಣ, ನವೀನ್ ಶೆಟ್ಟಿ ಎಡ್ಮೆಮಾರ್, ಆನಂದ್ ಶೆಟ್ಟಿ ಉಪಸ್ಥಿತರಿದ್ದರು.











