ಮಂಗಳೂರು, ಅ. 29 : ಯಕ್ಷ ಪ್ರತಿಭೆ ಮಂಗಳೂರು ಸಂಸ್ಥೆಯ 18ನೇ ವರ್ಷದ ಸಂಭ್ರಮದ ಅಂಗವಾಗಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಅಸ್ರಣ್ಣರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ, ಅಭಿನಂದನಾ ಕಾರ್ಯಕ್ರಮ ಅಕ್ಟೋಬರ್ 31ರ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ನಗರದ ಮಂಗಳಾದೇವಿ ದೇವಸ್ಥಾನದ ಮಂಗಳ ಮಂಟಪದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರನ್ನು ಗೌರವಿಸುವ ಹಾಗೂ ಉದಯೋನ್ಮುಖ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ವರ್ಷದ ಕಟೀಲು ಗೋಪಾಲಕೃಷ್ಣ ಅಸ್ರಣ್ಣರ ಸ್ಮರಣಾರ್ಥ ಗೌರವ ಪ್ರಶಸ್ತಿಯನ್ನು ಯಕ್ಷರಂಗದ ಹಿರಿಯ ಹಾಗೂ ಮೇರು ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ ಅವರಿಗೆ ಗೌರವಧನದೊಂದಿಗೆ ಪ್ರದಾನಿಸಲಾಗುವುದು. ಯಕ್ಷ ಪ್ರತಿಭಾ ಪ್ರಶಸ್ತಿಯನ್ನು ಕಲಾವಿದ, ಸಂಘಟಕ ಹಾಗೂ ನಿರ್ದೇಶಕ ಶರತ್ ಕುಮಾರ್ ಕದ್ರಿ ಅವರಿಗೆ ನೀಡಿ ಗೌರವಿಸಲಾಗುವುದು. ಮಂಗಳಾದೇವಿ ದೇವಸ್ಥಾನದ ಕಚೇರಿ ನಿರ್ವಾಹಕ ರಂಜಿತ್ ಅವರನ್ನು ಸನ್ಮಾನಿಸಲಾಗುವುದು. ಯಕ್ಷರಂಗದ ಉದಯೋನ್ಮುಖ ಕಲಾವಿದೆ ಅರ್ಷಿಯಾ ಖಾನ್ (ತನು ವಿಟ್ಲ) ಹಾಗೂ ಯುವ ಪ್ರತಿಭೆ ವಾರುಣೀ ನಾಗರಾಜ್ ಆಚಾರ್ಯ ಅವರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಲಕ್ಷ್ಮೀನಾರಾಯಣ ಅಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ಬಿಜೆಪಿಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಅದಾನಿ ಗ್ರೂಪ್ನ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ.ಕೆನರಾ ಬ್ಯಾಂಕ್ ಪ್ರಧಾನ ಕಚೇರಿ, ಮಂಗಳೂರಿನ ಪ್ರಧಾನ ವ್ಯವಸ್ಥಾಪಕ ಹಾಗೂ ವಲಯ ಮುಖ್ಯಸ್ಥ ಮಂಜುನಾಥ ಬಿ. ಸಿಂಗೈ ಮತ್ತು ಅರುಣ್ ಐತಾಳ್ ಮಂಗಳಾದೇವಿ ಗೌರವ ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ‘ಶ್ರೀಕೃಷ್ಣ ಲೀಲಾಮೃತ’ ಯಕ್ಷಗಾನ ಪ್ರದರ್ಶನ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಪ್ರಮುಖರಾದ ರವಿ ಅಲೆವೂರಾಯ ವರ್ಕಾಡಿ, ಮೋಹನ್ದಾಸ್ ರೈ,ಅಶೋಕ್ ಶೆಟ್ಟಿ, ಸುಜಾತಾ ಆಳ್ವ ಉಪಸ್ಥಿತರಿದ್ದರು.











