ಮಂಗಳೂರು, ನ. 19 : ಪಶ್ಚಿಮ ವಲಯದ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ (ಐಜಿಪಿ) ಎನ್. ಶಶಿಕುಮಾರ್ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಅವರು ವಲಯದ ವಿವಿಧ ಘಟಕಗಳ ಪೊಲೀಸ್ ಅಧಿಕಾರಿಗಳೊಂದಿಗೆ ಸಂಕ್ಷಿಪ್ತ ಸಭೆ ನಡೆಸಿದರು.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ವಲಯದ ಕಾನೂನು ಸುವ್ಯವಸ್ಥೆ, ಅಪರಾಧಗಳ ಸ್ವರೂಪ, ಸಂಚಾರ ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯ ಮುಂದಿರುವ ಸವಾಲುಗಳ ಬಗ್ಗೆ ಅಧಿಕಾರಿಗಳಿಂದ ಐಜಿಪಿ ಎನ್. ಶಶಿಕುಮಾರ್ ಅವರು ಮಾಹಿತಿ ಪಡೆದುಕೊಂಡರು.
ಜನರಿಗೆ ಉತ್ತಮ ಪೊಲೀಸ್ ಸೇವೆ ಒದಗಿಸುವುದು ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಯುವ ವಾತಾವರಣ ನಿರ್ಮಿಸುವುದು, ಅಪರಾಧ ತಡೆ ಹಾಗೂ ಪತ್ತೆ ಕಾರ್ಯ, ಸಂಚಾರ ಸಮಸ್ಯೆಗಳು ಹಲವು ಕಡೆ ನಿಭಾಯಿಸಬೇಕಾಗಿದೆ ಎಂಬ ಸಂದೇಶವನ್ನು ನೂತನ ಐಜಿಪಿ ನೀಡಿದ್ದಾರೆ.











