ಬಂಟ್ವಾಳ : ಕಾಂಗ್ರೆಸ್ ಅಭ್ಯರ್ಥಿ, ಮಾಜಿಸಚಿವ ಬಿ.ರಮಾನಾಥ ರೈ ಅವರ ಚುನಾವಣಾ ಪ್ರಚಾರದ ಭಾಗವಾಗಿ ಸೋಮವಾರ ಸಂಜೆ ರೋಡ್ ಶೋ ಜರಗಿತು. ಸ್ಟಾರ್ ಪ್ರಚಾರಕರಿಲ್ಲದ ರೋಡ್ ಶೋನಲ್ಲಿ ಹೆಚ್ಚಿನ ಜನ ಸೇರಿದ್ದರು. ಬಂಟ್ವಾಳದ ಕೇಂದ್ರ ಸ್ಥಾನ ಬಿ.ಸಿ.ರೋಡ್ ನಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ಕಾಂಗ್ರೆಸ್‍ನ ತ್ರಿವರ್ಣ ಧ್ವಜಗಳನ್ನು ಹಿಡಿದ ಕಾರ್ಯಕರ್ತರು, ರೈಯವರ ಅಭಿಮಾನಿಗಳು ಮುಖ್ಯರಸ್ತೆಯಲ್ಲಿ ಹೆಜ್ಜೆ ಹಾಕಿದರು.
ಪೊಳಲಿ ದ್ವಾರದ ಕೈಕಂಬ ಬಳಿ ಹಾಕಿದ್ದ ವೇದಿಕೆಯಲ್ಲಿ ಕೊನೆಯ ಚುನಾವಣಾ ಪ್ರಚಾರಸಭೆ ನಡೆಯಿತು.
ಐಶಾರಾಮಿ ಜೀವನ ನಡೆಸುವ ಆಸೆಯಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿಲ್ಲ. ಕ್ಷೇತ್ರದಲ್ಲಿ ಆರು ಬಾರಿ ಗೆಲ್ಲಿಸಿ ಶಾಸಕ, ಸಚಿವನನ್ನಾಗಿ ಮಾಡಿದ್ದೀರಿ. ಮತ್ತೆ 9ನೇ ಬಾರಿಗೆ ಸ್ಪರ್ಧಿಸುವ ಅವಕಾಶವನ್ನು ನೀಡಿದ್ದೀರಿ. ಈ ಋಣವನ್ನು ನಾನು ನನ್ನ ಜನ್ಮಜನ್ಮಾಂತರಕ್ಕೂ ಮರೆಯಲು ಸಾಧ್ಯವಿಲ್ಲ. ಈ ಋಣವನ್ನು ತೀರಿಸುವುದಕ್ಕಾಗಿ ಮತ್ತು ನಿಮ್ಮೆಲ್ಲರ ಸೇವೆಗಾಗಿ ಹಾಗೂ ಕ್ಷೇತ್ರದ ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವುದಕ್ಕಾಗಿ ಮತ್ತೊಮ್ಮೆ ಸ್ಪರ್ಧಿಸಿದ್ದೇನೆ ಎಂದರು.ಕಳೆದ ಚುನಾವಣೆಯಲ್ಲಿ ಸತತವಾಗಿ ಅಪಪ್ರಚಾರದ ಮೂಲಕ ನನ್ನನ್ನು ಸೋಲಿಸಲಾಯಿತು. ಸೋತ ಬಗ್ಗೆ ಬೇಸರವಿಲ್ಲ. ಆದರೆ, ಸೋಲಿಸಿದ ವಿಧಾನದ ಬಗ್ಗೆ ಬೇಸರವಿದೆ ಎಂದು ಮತ್ತೊಮ್ಮೆ ಸ್ಮರಿಸಿದರು.ಯಾವುದೇ ಸ್ಟಾರ್ ಪ್ರಚಾರಕರು ಇಲ್ಲದೆಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿದ್ದೀರಿ. ಅದಕ್ಕಾಗಿ ನಾನು ನಿಮಗೆ ಚಿರಋಣಿಯಾಗಿದ್ದೇನೆ. ನಾಮಪತ್ರ ಸಲ್ಲಿಕೆಯ ದಿನವೇ ಸಾವಿರಾರು ಸಂಖ್ಯೆಯಲ್ಲಿ ಬಂದು ನನಗೆ ಆಶೀರ್ವದಿಸಿದಿರಿ. ಇದೀಗ ಮತ್ತೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹರಸಿದ್ದೀರಿ. ಇನ್ನಿರುವ ಕೆಲವೇ ಗಂಟೆಗಳಲ್ಲಿ ಪ್ರತಿಯೊಬ್ಬರೂ ಶ್ರಮಪಟ್ಟು ಕಾಂಗ್ರೆಸ್ ಅನ್ನು ಬಂಟ್ವಾಳದಲ್ಲಿ ಮತ್ತೊಮ್ಮೆ ಗೆಲ್ಲಿಸಬೇಕು ಎಂದು ರೈ ವಿನಂತಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಬಿ.ಎಚ್. ಖಾದರ್, ಅಶ್ವನಿ ಕುಮಾರ್ ರೈ, ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ, ಪ್ರಮುಖರುಗಳಾದ ಪದ್ಮಶೇಖರ್ ಜೈನ್, ಮೊಹಮ್ಮದ್ ಶರೀಫ್, ಲುಕ್ಮಾನ್ ಬಂಟ್ವಾಳ್, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಅಬ್ಬಾಸ್ ಅಲಿ, ಪಿ.ಎ. ರಹೀಂ, ಸುರೇಶ್ ಜೋರಾ, ಶಬೀರ್ ಸಿದ್ದಕಟ್ಟೆ, ಜಯಂತಿ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಸುಭಾಶ್ ಕೊಲ್ನಾಡು, ಜನಾರ್ಧನ ಚೆಂಡ್ತಿಮಾರ್, ವಾಸು ಪೂಜಾರಿ, ಜೊಸ್ಪಿನ್ ಡಿಸೋಜ, ಜೆಸಿಂತಾ ಡಿಸೋಜಾ, ನವಾಝ್ ಬಡಕಬೈಲ್, ಮೊಹಮ್ಮದ್ ನಂದರಬೆಟ್ಟು, ಪರಮೇಶ್ವರ ಮೂಲ್ಯ, ನಾರಾಯಣ ನಾಯ್ಕ್, ಅಣ್ಣು ಖಂಡಿಗ, ಚಂದ್ರಹಾಸ್ ನಾಯ್ಕ್, ಸಂಪತ್ ಕುಮಾರ್ ಶೆಟ್ಟಿ, ಮೋಹನ್ ಶೆಟ್ಟಿ ಪಂಜಿಕಲ್ಲು, ಮೊಹಮ್ಮದ್ ನಂದಾವರ, ಪ್ರೀತಿರಾಜ್ ದ್ರಾವಿಡ, ಇಬ್ರಾಹಿಂ ಕೈಲಾರ, ಜಗದೀಶ್ ಕೊಯಿಲ, ಪ್ರವೀಣ್ ಬಂಟ್ವಾಳ್, ಸದಾಶಿವ ಬಂಗೇರ, ಹಸೈನಾರ್ ಶಾಂತಿಅಂಗಡಿ, ಸುರೇಶ್ ಬಿ.ನಾವೂರು, ಲೋಲಾಕ್ಷ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.