ಪುತ್ತೂರು, ಅ. 19 : ಮಂಗಳೂರುನಿಂದ ಸುಳ್ಯದ ಕಡೆಗೆ ಪಾಮ್ ಆಯಿಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರೊಂದು ಪಲ್ಟಿಯಾಗಿ ಪಾಮ್ ಆಯಿಲ್ ಸೋರಿಕೆಯಾದ ಘಟನೆ ಪುತ್ತೂರಿನ ಬೈಪಾಸ್ ರಸ್ತೆ ಉರ್ಲಂಡಿ ಬಳಿ ಬುಧವಾರ ನಡೆದಿದೆ.
ರಾತ್ರಿ 10.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು ಟ್ಯಾಂಕರ್ ಉರುಳಿಬಿದ್ದ ತಕ್ಷಣ ಸ್ಥಳೀಯರು ಆಗಮಿಸಿ, ಇತರರಿಗೆ ಎಚ್ಚರಿಸಿ ರಸ್ತೆಯಲ್ಲಿ ಆಯಿಲ್ ಚೆಲ್ಲಿರುವುದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಿದರು. ಟ್ಯಾಂಕರ್ ವಿದ್ಯುತ್ ಕಂಬ, ತಂತಿಗಳಿಗೆ ತಾಗಿದ್ದರೂ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಕಾರೊಂದಕ್ಕೆ ಅಪಘಾತವಾಗುವುದನ್ನು ತಪ್ಪಿಸುವ ಯತ್ನದಲ್ಲಿ ಟ್ಯಾಂಕರ್ ಪಲ್ಟಿಯಾಗಿದೆ ಎನ್ನಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಗ್ನಿ ಶಾಮಕ ದಳದವರು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದಾರೆ.