ಉಡುಪಿ, ಜ. 15: ಉಡುಪಿ ಶ್ರೀಕೃಷ್ಣ ಮಠದ ವಾರ್ಷಿಕ ಜಾತ್ಸೋತ್ಸವ ಎಂದೇ ಕರೆಯುವ ಸಪ್ತೋತ್ಸವವು ಜ.15, ರವಿವಾರ ಹಗಲಿನ ರಥೋತ್ಸವ ‘ಚೂರ್ಣೋತ್ಸವ’ ದೊಂದಿಗೆ’ ಸಂಪನ್ನಗೊಂಡಿತು.
ಬೆಳಗ್ಗೆ 8.30ಕ್ಕೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ ಪರ್ಯಾಯ ಶ್ರೀಪಾದರ ಸಹಿತ ಅಷ್ಟಮಠದ ಯತಿಗಳು ಮಂಗಳಾರತಿ ಬೆಳಗಿದರು.
ಬಳಿಕ ಭಕ್ತರಿಗೆ ಪ್ರಸಾದಗಳನ್ನು ವಿತರಿಸಲಾಯಿತು. ಪರ್ಯಾಯ ಶ್ರೀಗಳ ಸಹಿತ ವಿವಿಧ ಮಠಾಧೀಶರು ಬ್ರಹ್ಮರಥವನ್ನು ಎಳೆಯುವ ಮೂಲಕ ಹಗಲು ತೇರಿನ ಮೆರವಣಿಗೆ ಪ್ರಾರಂಭಗೊಂಡಿತು ನಂತರ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟ ಮಠದ ಸ್ವಾಮೀಜಿಯವರಿಗೆ ಪರ್ಯಾಯ ಮಠದಿಂದ ಗೌರವ ಸಮರ್ಪಣೆ, ಸೇವಾಕರ್ತೃಗಳಿಗೆ ಪ್ರಸಾದ ವಿತರಣೆ ನಡೆಯಿತು. ಬಳಿಕ ಮಧ್ವ ಸರೋವರದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣದೇವರ ಅವಭೃತಥೋತ್ಸವ ನಡೆಯಿತು.