ಬೆಂಗಳೂರು,ಮೇ. 31 : ರಾಜ್ಯದಲ್ಲಿ ದಿನೇ ದಿನೇ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು.ಮೊನ್ನೆ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಮಕ್ಕಳಲ್ಲಿ ನೆಗಡಿ, ಜ್ವರ, ಕೆಮ್ಮು ಇದ್ದರೆ ಅವರಿಗೆ ಕಡ್ಡಾಯವಾಗಿ ರಜೆ ನೀಡಬೇಕೆಂದು ಸೂಚಿಸಿದ್ದಾರೆ.
ಇದರ ಬೆನ್ನಲ್ಲೇ ಇದೀಗ ರಾಜ್ಯ ಆರೋಗ್ಯ ಇಲಾಖೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್ ಅವರು ಹೊಸ ಗೈಡ್ ಲೈನ್ಸ್ ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ.
ಮಕ್ಕಳಲ್ಲಿ ಜ್ವರ , ಕೆಮ್ಮು, ನೆಗಡಿ ಗುಣಲಕ್ಷಣಗಳು ಬಂದರೆ ಶಾಲೆಗೆ ಕಳುಹಿಸಬಾರದು. ಸಂಪೂರ್ಣವಾಗಿ ಗುಣಮುಖರಾದ ಮೇಲೆ ಶಾಲೆಗಳಿಗೆ ಕಳುಹಿಸಬೇಕು.ವಿದ್ಯಾರ್ಥಿಗಳಲ್ಲಿ ಕೊರೊನಾ ಗುಣಲಕ್ಷಣಗಳು ಕಂಡುಬಂದರೆ ಕೂಡಲೇ ಅವರ ಪೋಷಕರಿಗೆ ತಿಳಿಸಿ ಮನೆಗೆ ಕಳುಹಿಸಬೇಕು. ಅಲ್ಲದೇ ಶಾಲಾ ಸಿಬ್ಬಂದಿಯಲ್ಲಿ ಗುಣಲಕ್ಷಣ ಕಂಡು ಬಂದಲ್ಲಿ ಮುಂಜಾಗೃತ ಕ್ರಮ ಪಾಲಿಸಬೇಕು. ಶಾಲೆಗಳಲ್ಲಿ ಸ್ವಚ್ಛತೆ, ಹಾಗೂ ಕೋವಿಡ್ ನಿಯಮ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 234 ಇದ್ದು, ಅದರಲ್ಲಿ ಬೆಂಗಳೂರು ಒಂದರಲ್ಲೇ ಬರೋಬ್ಬರಿ 150ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ದಾಖಲಾಗಿದೆ.