ಮಂಗಳೂರು, ಜೂ. 29: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 15ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳ ಆ.1-2ರಂದು ಮೂಡುಬಿದಿರೆ ಆಳ್ವಾಸ್ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ|ಎಂ. ಮೋಹನ್ ಆಳ್ವ ಅವರು ಜೂ. 23, ಸೋಮವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಆಳ್ವಾಸ್ ವಿದ್ಯಾಸಂಸ್ಥೆಯು ಇಲ್ಲಿಯವರೆಗೆ ವಿವಿಧ ಭಾಗಗಳಲ್ಲಿ 21 ಬೃಹತ್ ಉದ್ಯೋಗ ಮೇಳವನ್ನು ನಡೆಸಿದೆ. ಪ್ರತೀ ಮೇಳದಲ್ಲಿ ಸರಾಸರಿ 200 ರಷ್ಟು ಪ್ರತಿಷ್ಠಿತ ಕಂಪೆನಿಗಳು ಪಾಲ್ಗೊಂಡಿವೆ. ಈ ಬಾರಿಯೂ ಬ್ಯಾಂಕಿಂಗ್ ಮತ್ತು ಹಣಕಾಸು,ಮ್ಯಾನುಫ್ಯಾಕ್ಚರಿಂಗ್, ಐಟಿ, ಐಟಿಎಸ್, ಹೆಲ್ತ್ ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಹಾಸ್ಪಿಟಾಲಿಟಿ, ಆಟೋ ಮೊಬೈಲ್, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್ ಜಿ ಓಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ .ಈ ಬಾರಿ ಈವರೆಗೆ 80 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಹೆಚ್ಚುವರಿಯಾಗಿ 130 ಕಂಪೆನಿಗಳು ಪಾಲ್ಗೊಳ್ಳುವ ಭರವಸೆ ನೀಡಿವೆ. ಒಟ್ಟು 300 ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಎಂಬಿಎ, ಎಂ.ಕಾಂ, ಬಿ.ಕಾಂ, ಬಿಬಿಎ, ಬಿಎಸ್ಸಿ, ಬಿಎ ಬಿಸಿಎ ಮತ್ತಿತರ ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ವಾಣಿಜ್ಯ ಹಾಗೂ ಮ್ಯಾನೇಜ್ ಮೆಂಟ್, ಎಂಜಿನಿಯರಿಂಗ್, ಕಲಾ, ಬೇಸಿಕ್ ಸೈನ್ಸ್ ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಎಸೆಸೆಲ್ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಕಂಪೆನಿಗಳು ಉದ್ಯೋಗ ಅವಕಾಶ ಕಲ್ಪಿಸಲಿವೆ. ಕರಾವಳಿ ಭಾಗದ ವಿವಿಧ ಕಂಪೆನಿ, ಸಂಸ್ಥೆ ಹೊರಜಿಲ್ಲೆಯ ವಿವಿಧ ಸಂಸ್ಥೆ ಕಂಪೆನಿಗಳು ಸಹಿತ ಉದ್ಯೋಗ ಸಂಸ್ಥೆಗಳೂ ಪಾಲ್ಗೊಳ್ಳುತ್ತಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವ್ಯವಸ್ಥಾಪಕ ಟ್ರಸ್ಟಿ ವಿವೇಕ ಆಳ್ವ, ತರಬೇತಿ ಹಾಗೂ ನೇಮಕಾತಿ ವಿಭಾಗ ಮುಖ್ಯಸ್ಥ ರಂಜಿತಾ, ಆಳ್ವಾಸ್ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್ ಸೈಟ್ www.alvaspragati.com ನಲ್ಲಿ ಪ್ರಕಟಿಸ ಲಾಗಿದೆ. ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಈ ವೆಬ್ಸೈಟ್ನಲ್ಲಿ ಕಡ್ಡಾಯವಾಗಿ ಉಚಿತ ಆನ್ಲೈನ್ ನೋಂದಣಿ ಮಾಡಿಕೊಳ್ಳಬಹುದು.ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಜು.31ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಐಟಿಐ ಅಭ್ಯರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು.