ಮಂಗಳೂರು, ಆ.14 : ಕೊಡಿಯಾಲ್ ಬೈಲ್ ನಲ್ಲಿರುವ ಶ್ರೀ ಕೃಷ್ಣ ಬಲರಾಮ ಮಂದಿರ, ಇಸ್ಕಾನ್ ನಲ್ಲಿ ಆ.15 ಮತ್ತು 16ರಂದು ಅದ್ದೂರಿಯಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ ಎಂದು ಇಸ್ಕಾನ್ನ ಅಧ್ಯಕ್ಷ ಗುಣಾಕರ ರಾಮದಾಸ ಅವರು ಬುಧವಾರ ಶ್ರೀ ಕೃಷ್ಣ ಬಲರಾಮ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, 15ರಂದು ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಕಲಾಕುಂಜದಲ್ಲಿ ಶ್ರೀಕೃಷ್ಣನಿಗೆ ಮಹಾಭಿಷೇಕ, ಭಜನೆ, ಬೆಣ್ಣ, ಉಯ್ಯಾಲೆ ಸೇವೆಗಳು, ಧಾರ್ಮಿಕ ಕಾರ್ಯಕ್ರಮಗಳು, ಆಧ್ಯಾತ್ಮಿಕ ಪ್ರಮಚನಗಳು ನಡೆಯಲಿವೆ.16ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೊಡಿಯಾಲ್ಬೈಲ್ ಶಾರದಾ ವಿದ್ಯಾಲಯದ ಮೈದಾನದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ‘ಶ್ರೀಕೃಷ್ಣ ವೈಭವಂ’ ರೂಪಕ, ಬ್ಲಾಗರ್ಗಳು, ರೀಲ್ಸ್ ಮಾಡುವವರಿಗಾಗಿ ‘ಬ್ಲಾಗ್ ಫಾರ್ ಕೃಷ್ಣ’ ಕಾರ್ಯಕ್ರಮ, ಛದ್ಮವೇಷ ಸ್ಪರ್ಧೆ, ಕೃಷ್ಣನ ಕುರಿತ ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಮಧ್ಯರಾತ್ರಿ ಕೃಷ್ಣನಿಗೆ ಜನ್ಮ ಆರತಿ, ಮಹಾಭಿಷೇಕದೊಂದಿಗೆ ಆಚರಣೆ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸನಂದನ ದಾಸ, ಸುಂದರ ಗೌರ ದಾಸ, ಬಿ.ಜೆ. ಮನು ಉಪಸ್ಥಿತರಿದ್ದರು.











