ಮಂಗಳೂರು, ಆ.22 : ಕರ್ನಾಟಕ ಸರ್ಕಾರದ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮತ್ತು ಕೇರಳ ಸರ್ಕಾರದ ತಿರುವನಂತಪುರದ ಭಾರತ್ ಭವನ್ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 23 ರಂದು ತಿರುವನಂತಪುರದ ತೈಕ್ಕಾಡಿ ನಲ್ಲಿರುವ ಭಾರತ್ ಭವನ ಸಭಾಂಗಣದಲ್ಲಿ ಆನಂತಪುರಿ ಗಡಿನಾಡ ಕನ್ನಡ ಸಾಂಸ್ಕೃತಿಕ ಉತ್ಸವವನ್ನು ವೈವಿಧ್ಯ ಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ ಎಂದು ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಸಂಸ್ಥಾಪಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಬೆಳಗ್ಗೆ 9ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 10 ಗಂಟೆಗೆ ಕರ್ನಾಟಕ ಸರಕಾರದ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮ ವನ್ನು ಕೇರಳ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಿ.ಆರ್.ಅನಿಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮಹಳ್ಳಿ, ಭಾರತ್ ಭವನ ಕಾರ್ಯದರ್ಶಿ ಪ್ರಮೋದ್ ಪಯ್ಯನ್ನೂರ್, ಹಿರಿಯ ವಿದ್ವಾಂಸ ವೀರಣ್ಣ ತುಪ್ಪದ, ಅಹಮ್ಮದಾಬಾದ್ ಕನ್ನಡ ಸಂಘದ ಅಧ್ಯಕ್ಷ ಹಣಮಂತ ಬೆನ್ನೂರ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎಂ.ಎಸ್.ಮದಭಾವಿ, ಅಶೋಕ ಚಂದರಗಿ, ಶಿವರೆಡ್ಡಿ ಖ್ಯಾಡೇದ, ಮತ್ತಿತರರು ಭಾಗವಹಿಸಲಿರುವರು ಎಂದರು.
ಮಧ್ಯಾಹ್ನ 12ರಿಂದ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿ ಗೋಷ್ಠಿ ನಡೆಯಲಿದೆ. ಬಳಿಕ ಕನ್ನಡ, ಮಲಯಾಳಂ, ತುಳು ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಧ್ಯಾಹ್ನ 2 ರಿಂದ ‘ಬಹುಭಾಷಾ ಸಮಾಜದಲ್ಲಿ ಸಹಬಾಳ್ವೆ ಮತ್ತು ಸಂವಹನ’ – ವಿಚಾರಗೋಷ್ಠಿ ಸಂಶೋಧಕಿ ಡಾ.ಮೀನಾಕ್ಷಿ ರಾಮ ಚಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಜೆ 3ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಿವಾನಂದ ಕೋಟ್ಯಾನ್ ಕಟಪಾಡಿ ಕೃತಿಯನ್ನು ಕೇರಳ ಸರಕಾರದ ಶಿಕ್ಷಣ ಸಚಿವ ಶಿವನ್ ಕುಟ್ಟಿ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ.ಆಶ್ರಫ್, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜಾಣಗೆರೆ ವೆಂಕಟರಾಮಯ್ಯ ಭಗತ್‌ರಾಜ್ ನಿಜಾಮಕರಿ, ಡಾ.ಸಂಜೀವ್ ಕುಮಾರ್ ಅತಿವಾಲೆ, ತಿರುವನಂತಪುರಂ ಕರ್ನಾಟಕ ಸಂಘದ ಅಧ್ಯಕ್ಷ ಭಾನುಮತಿ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕಾಧ್ಯಕ್ಷ ಡಾ.ಮಲ್ಲಿಕಾರ್ಜುನ ಎಸ್. ನಾಸಿ, ವಿಜ್ಞಾನಿ ಡಾ. ಇಬ್ರಾಹೀಂ ಬಾತಿಸ್ ಕೆ. ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಗಡಿನಾಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯಕಟ್ಟೆ, ಸಂಶೋಧಕಿ ಡಾ.ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು.