ಮಂಗಳೂರು, ಸೆ. 30 : ರೋಹನ್ ಕಾರ್ಪೊರೇಶನ್ ವತಿಯಿಂದ ಮಂಗಳೂರು ಪೌರ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಉದ್ದೇಶದಿಂದ ಸೆ. 29 ರಂದು ಮಂಗಳೂರು ಮಹಾನಗರ ಪಾಲಿಕೆಗೆ 100 ಜೋಡಿ ಸುರಕ್ಷತಾ ಪಾದರಕ್ಷೆಗಳನ್ನು ವಿತರಣೆ ಮಾಡುವ ಸಾಮಾಜಿಕ ಕಾರ್ಯವನ್ನು ಹಮ್ಮಿಕೊಂಡಿತು.
ಈ ಕಾರ್ಯಕ್ರಮವು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀರವಿಚಂದ್ರ ನಾಯಕ್ ಉಪಸ್ಥಿತರಿದ್ದರು. ರೋಹನ್ ಕಾರ್ಪೊರೇಶನ್ ಮಾರ್ಕೆಟಿಂಗ್ ಮ್ಯಾನೇಜರ್ ಮಾಕ್ಷಿಮ್ ಲೋಬೊ ಕಾರ್ಮಿಕರಿಗೆ ಪಾದರಕ್ಷೆಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರೋಹನ್ ಕಾರ್ಪೊರೇಶನ್ ಮಾರ್ಕೆಟಿಂಗ್ ಮ್ಯಾನೇಜರ್ ಮಾಕ್ಷಿಮ್ ಲೋಬೊ ಅವರು ಮಾತನಾಡಿ, ಪೌರ ಕಾರ್ಮಿಕರು ನಮ್ಮ ಸಮಾಜದ ಬೆನ್ನೆಲುಬು. ಅವರ ಶ್ರಮದಿಂದಲೇ ನಗರ ಸ್ವಚ್ಛವಾಗಿರುತ್ತದೆ. ಅವರ ಸುರಕ್ಷತೆಗಾಗಿ ನಾವು ಕೈಗೊಂಡಿರುವ ಈ ಉಪಕ್ರಮ ನಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿದೆ ಎಂದು ಹೇಳಿದರು.
ಪೌರ ಕಾರ್ಮಿಕರ ಸುರಕ್ಷತೆಯ ಕಡೆ ಗಮನ ಹರಿಸಿರುವ ರೋಹನ್ ಕಾರ್ಪೊರೇಶನ್ ನ ಸಮಾಜಮುಖಿ ಕಾರ್ಯವನ್ನು ಮೆಚ್ಚಿ, ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಮಹಾನಗರ ಪಾಲಿಕೆ ಆಯುಕ್ತರು ಶುಭ ಹಾರೈಸಿದರು.