ಮಂಗಳೂರು, ಆ. 21 : ತಾಲೂಕಿನ ಪೇಜಾವರ ಕೆಂಜಾರಿನಲ್ಲಿರುವ ಕಪಿಲಾ ಗೋ ಶಾಲೆಯಲ್ಲಿ ಅ. 22ರಂದು 108 ಕಪಿಲಾ ಗೋವುಗಳಿಗೆ ಸಾರ್ವಜನಿಕ ಪೂಜೆಯನ್ನು ಆಯೋಜಿಸಲಾಗಿದೆ ಎಂದು ಕಪಿಲಾ ಗೋ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವುಗಳಿಗೆ ಸಾರ್ವಜನಿಕ ಪೂಜೆಯು ಬೆಳಗ್ಗೆ 6ರಿಂದ 11.30ರ ವರೆಗೆ ನಡೆಯಲಿದೆ. ಗೋವಿನ ಸಂತತಿ ರಕ್ಷಣೆಗಾಗಿ 2012ರಲ್ಲಿ 2 ಗೋವುಗಳಿಂದ ಆರಂಭವಾದ ಈ ಗೋ ಶಾಲೆಯಲ್ಲಿ ಸುಮಾರು 700ರಷ್ಟು ಗೋವುಗಳಿವೆ, ಕಪಿಲಾ ಗೋ ಶಾಲೆಯಲ್ಲಿ ಗೋಮಾತೆಯ ಸೇವೆಯೇ ಹೊರತು ಉದ್ಯಮ ನಡೆಸಲಾಗುತ್ತಿಲ್ಲ ಎಂದು ಹೇಳಿದರು.
ಕಪಿಲಾ ಗೋ ಶಾಲೆಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹಾಗೂ ಉದ್ಯಮಿ ಸುರೇಶ್ ಶೆಟ್ಟಿ ಮಾತನಾಡಿ, ಗೋ ಶಾಲೆಯಲ್ಲಿ ಗೋವುಗಳು ಸಂಖ್ಯೆ ಹೆಚ್ಚುತ್ತಿರುವುದರಿಂದ ಗೋವುಗಳು ನಿರಾಳವಾಗಿ ನಡೆದಾಡಲು ಸ್ಥಳದ ಕೊರತೆ ಇದೆ. ಅದ್ದರಿಂದ ಸುಮಾರು 50 ಸಾವಿರ ಚ.ಅಡಿ ವಿಸ್ತೀರ್ಣದ ಗೋ ಶಾಲೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 4 ಕೋ.ರೂ ವೆಚ್ಚದ ಯೋಜನೆಯ ನೀಲನಕಾಶೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಈ ಯೋಜನೆಯನ್ನು ದಾನಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಸುಸಜ್ಜಿತ ಗೋ ಶಾಲೆಯನ್ನು ನಿರ್ಮಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿ ಸಂಚಾಲಕ ರವಿ ಕಾವೂರು, ಸದಸ್ಯರಾದ ಸಂತೋಷ್ ಕಾವೂರು, ಯತೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.