ಮಂಗಳೂರು, ಡಿ.16 : ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ ‘ಪರ್ವ 2025’ ಫುಡ್ ಫೆಸ್ಟಿವೆಲ್, ಲೈಫ್ ಸ್ಟೈಲ್ ಮತ್ತು ಸೀರೆ ಮೇಳ ನಡೆಯಲಿದೆ ಎಂದು ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷರಾದ ಸರೋಜಾ ಟಿ.ಶೆಟ್ಟಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿಗಳಾದ ರಾಜೇಶ್ವರಿ ಡಿ ಶೆಟ್ಟಿ ಮಾತಾಡಿ ಮೂರು ದಿನಗಳ ಕಾಲ ಸುರತ್ಕಲ್ ಬಂಟರ ಭವನದಲ್ಲಿ ವಿವಿಧ ಮಳಿಗೆಗಳ ಸೀರೆ ಮಾರಾಟ ಮೇಳ ನಡೆಯಲಿದೆ. ಈ ಸೀರೆ ಮೇಳದಲ್ಲಿ ನವನವೀನ ಮಾದರಿಯ ಕಾಂಚಿಪುರಂ, ರೇಷ್ಮೆ, ಬನಾರಸ್, ಬಂಗಾಲಿ ಕಾಟನ್ ಹಾಗೂ ವಿವಿಧ ಮಾದರಿಯ ಸೀರೆಗಳು ಸಲ್ವಾರ್ ಸೂಟ್, ಖಾದಿ ಭಂಡಾರ, ಕುರ್ತಾಗಳು, ಕಸೂತಿ, ಹಸ್ತಕಲೆ ಬ್ಯಾಗುಗಳು,ಒಂದು ಗ್ರಾಂ ಚಿನ್ನಾಭರಣ ವಿವಿಧ ವಿನ್ಯಾಸದ ಆರ್ಟಿಫಿಶಲ್ ಜ್ಯುವೆಲ್ಲರಿ, ಮಸಾಲೆ ಹುಡಿಗಳು,ಹರ್ಬಲ್ ಉತ್ಪನ್ನಗಳು ಹಾಗೂ ಅನೇಕ ವಿಧವಿಧ ಉತ್ಪನ್ನಗಳ ಅಪೂರ್ವ ಸಂಗ್ರಹವೂ ಇರಲಿದೆ ಎಂದು ಹೇಳಿದರು.
ಡಿ. 20 ರಂದು ಶನಿವಾರ ಸಂಜೆ 7 ಕ್ಕೆ ಪೆರ್ಮದ ಕಲಾವಿದೆರ್ ಚೇಳಾರ್ ತಂಡದಿಂದ “ಎನ್ನಿಲೆಕ್ಕ ಇಜ್ಜೆರ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಡಿ.21 ರಂದು ಸಂಜೆ 6 ಗಂಟೆಗೆ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ ಸಂಗೀತ ರಸ ಮಂಜರಿ, ಬಳಿಕ 7 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ “ವೈರಲ್ ವೈಶಾಲಿ” ನಾಟಕ ಪ್ರದರ್ಶನ ಗೊಳ್ಳಲಿದೆ.ಡಿ. 20 ಮತ್ತು 21 ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತರ ತನಕ ಬಗೆಬಗೆಯ ತಿಂಡಿತಿನಿಸುಗಳ ಫುಡ್ ಫೆಸ್ಟಿವಲ್ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕೋಶಾಧಿಕಾರಿ ಮಾಲತಿ ಜೆ ಶೆಟ್ಟಿ, ಜೊತೆ ಕಾರ್ಯದರ್ಶಿ ಕವಿತಾ ಪಿ ಶೆಟ್ಟಿ ಉಪಸ್ಥಿತರಿದ್ದರು.











