ಸುರತ್ಕಲ್, ಮೇ 06 : ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ 45 ವರ್ಷ ಮೇಲ್ಪಟ್ಟ ಆಟಗಾರರ ‘ಓವರ್ ಆರ್ಮ್’ ಕ್ರಿಕೆಟ್ ಪಂದ್ಯಾವಳಿ ‘ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್–5’ ಮೇ 9 ಮತ್ತು 10ರಂದು ಸುರತ್ಕಲ್ನ ಗೋವಿಂದದಾಸ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಕಿರಣ್ ಆಚಾರ್ಯ ಅವರು ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ 45 ವರ್ಷ ಮೇಲ್ಪಟ್ಟ ನುರಿತ ಆಟಗಾರರ ತಂಡಗಳು ಭಾಗವಹಿಸಲಿವೆ. ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಭರ್ಜರಿ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ಘೋಷಿಸಲಾಗಿದ್ದು, ಪ್ರಥಮ ಬಹುಮಾನವಾಗಿ ರೂ. 1,00,005 ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 50,005 ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ಆಕರ್ಷಕ ಟ್ರೋಫಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಸದಸ್ಯ ಪೃಥ್ವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.











