ಮಂಗಳೂರು, ಮೇ 22 : ಕರಾವಳಿಯ ಸ್ಯಾಂಡಿಸ್ ಕಂಪೆನಿ’ ಅರ್ಪಿಸುವ ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲಂ ಅವಾರ್ಡ್ಸ್ 2026 ಪ್ರದಾನ ಕಾರ್ಯಕ್ರಮ ಮೇ 24ರಂದು ಸಂಜೆ 3 ಗಂಟೆಗೆ ಮುಲ್ಕಿಯ ಕೊಲ್ನಾಡ್ ನ ಸುಂದರರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಸ್ಯಾಂಡಿಸ್ ಕಂಪೆನಿಯ ಮಾಲಕರಾದ ಸಂದೇಶ್ ರಾಜ್ ಬಂಗೇರ ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಂಗೀತ ನಿರ್ದೇಶಕ ಗುರುಕಿರಣ್ ನಿರ್ದೇಶಕ ತರುಣ್ ಸುಧೀರ್ , ನಟಿ ಸೋನಾಲ್ ಮಾಂತೆರೋ, ನಿರ್ಮಾಪಕಿ ಶಿಲ್ಪಾ ಗಣೇಶ್ ಹಾಗೂ ನಟ ತ್ರಿವಿಕ್ರಮ ಭಾಗವಹಿಸಲಿದ್ದಾರೆ ಎಂದರು.
ಇವರೊಂದಿಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಎ.ಕೋಟ್ಯಾನ್, ಮೈಂಡ್ ಮೆಕ್ಯಾನಿಸಂ ಸಂಸ್ಥಾಪಕ ಶ್ರೀನಾಥ್ ಶೆಟ್ಟಿ, ಆಸ್ತ್ರ ಗ್ರೂಪ್ ಸಂಸ್ಥಾಪಕ ಲಂಚುಲಾಲ್ ಕೆ.ಎಸ್. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸೇರಿದಂತೆ ತುಳು ಚಿತ್ರರಂಗದ ಕಲಾವಿದರು, ನಿರ್ಮಾಪಕರು ಮತ್ತು ತಂತ್ರಜ್ಞರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
2025ರಲ್ಲಿ ಬಿಡುಗಡೆಯಾದ ಎಂಟು ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದು, ‘ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್’ ಹಾಗೂ ‘ವರ್ಸಟೈಲ್ ಆಕ್ಟರ್ ಅವಾರ್ಡ್’ ಸೇರಿದಂತೆ ಒಟ್ಟು 30 ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಅಪೂರ್ವ ಸಾಧನೆಗೈದ ದೇವದಾಸ್ ಕಾಪಿಕಾಡ್ ಹಾಗೂ ಸರೋಜಿನಿ ಶೆಟ್ಟಿ ಅವರಿಗೆ ವಿಶೇಷ ಸನ್ಮಾನ. ಜೊತೆಗೆ ತುಳು ಚಿತ್ರರಂಗದ ನಟ-ನಟಿಯರಿಂದ ನೃತ್ಯ ಕಾರ್ಯಕ್ರಮ, ‘ಸಿಸಿಲಿಂಗ್ ಗಾಯ್ಸ್’ ತಂಡದ ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮಗಳನ್ನು ವೀಕ್ಷಕರನ್ನು ರಂಜಿಸಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸಚಿನ್ ಉಪ್ಪಿನಂಗಡಿ, ಯಶ್ ರಾಜ್ ಹಾಗೂ ಸಾತ್ವಿಕ್ ಉಪಸ್ಥಿತರಿದ್ದರು.











