ಶಿಮ್ಲಾ, ಜೂ. 06 : ಹಿಮಾಚಲ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 5.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಾಂಗ್ರಾ, ಚಂಬಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಕಂಪನದ ಅನುಭವವಾಗುತ್ತಿದ್ದಂತೆ ಜನರು ಭಯದಿಂದ ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಕಾಂಗ್ರಾ–ಚಂಬಾ ಗಡಿಯ ಸಮೀಪ ಇರುವ ಧರ್ಮಶಾಲಾದಿಂದ ಸುಮಾರು 40 ಕಿ.ಮೀ. ದೂರದಲ್ಲಿ 5 ಕಿ.ಮೀ. ಆಳದಲ್ಲಿ ರಾತ್ರಿ 10.04ಕ್ಕೆ ಈ ಭೂಕಂಪ ಸಂಭವಿಸಿದೆ. ಈ ಭೂಕಂಪದ ಕೇಂದ್ರಬಿಂದು ಕಾಂಗ್ರಾದ ಧರ್ ಗೊಡೋಯ್ ಸಮೀಪದಲ್ಲಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಯಾವುದೇ ಭಾಗದಲ್ಲಿ ಜೀವಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿ ಉಂಟಾದ ಕುರಿತು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.










