ಕಾಸರಗೋಡು, ಜೂ. 10 : ಗಾಳಿಯ ಅಬ್ಬರಕ್ಕೆ ತೆಂಗಿನ ಮರ ಮುರಿದು ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಬುಧವಾರ ಕುಂಬಳೆ ಸಮೀಪದ ಪೆರುವಾಡ್ ಮೈದಾನ ಬಳಿ ನಡೆದಿದೆ. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಮೃತರನ್ನು ಪೆರುವಾಡಿನ ಅಬ್ದುಲ್ಲ (65) ಎಂದು ಗುರುತಿಸಲಾಗಿದೆ.
ಅಬ್ದುಲ್ಲ ಅವರು ಬೆಳಿಗ್ಗೆ ಸ್ನೇಹಿತರಾದ ಇಬ್ರಾಹಿಂ ಮತ್ತು ಹಸೈನಾರ್ ಜೊತೆ ಕುಳಿತು ಮಾತನಾಡುತ್ತಿದ್ದ ವೇಳೆ ಜೋರಾಗಿ ಗಾಳಿ ಬೀಸಿದ ಪರಿಣಾಮ ತೆಂಗಿನ ಮರ ಮುರಿದು ಅವರ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.










