ಮಂಗಳೂರು,ಜೂ. 14 : ಎಂಸಿಸಿ ಬ್ಯಾಂಕ್ನ 2025–26ನೇ ಹಣಕಾಸು ವರ್ಷದ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಜೂನ್ 13ರಂದು ಮಂಗಳೂರು ಆಡಳಿತ ಕಚೇರಿಯ ಪಿ.ಎಫ್.ಎಕ್ಸ್. ಸಾಲ್ದಾನ್ಹಾ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್‌ಗಳಾದ ವಂ. ಫಾ. ಮ್ಯಾಕ್ಸಿಂ ರೊಸಾರಿಯೊ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು, ಎಂಸಿಸಿ ಬ್ಯಾಂಕ್ ಅನ್ನು ಕ್ಯಾಥೋಲಿಕ್ ಸಮುದಾಯದ ಹೆಮ್ಮೆ ಮತ್ತು ಅಮೂಲ್ಯ ರತ್ನವೆಂದು ಬಣ್ಣಿಸಿ, ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ಶ್ಲಾಘಿಸಿದರು.
ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ಅವರ ದೂರದೃಷ್ಟಿಯ ನಾಯಕತ್ವ, ನಿರ್ದೇಶಕರ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿಯ ಸಮರ್ಪಿತ ಸೇವೆಯನ್ನು ಪ್ರಶಂಸಿಸಿದರು.
ಗ್ರಾಹಕ ಸ್ನೇಹಿ ಸೇವೆ, ವೃತ್ತಿಪರತೆ ಮತ್ತು ಬದ್ಧತೆಯೇ ಬ್ಯಾಂಕ್‌ಗೆ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಟ್ಟಿದೆ. ಬ್ಯಾಂಕ್ನ ನಿರಂತರ ಬೆಳವಣಿಗೆಗೆ ನವೀನತೆ, ತಂಡದ ಕಾರ್ಯಪಟುತ್ವ, ನಿರಂತರ ಕಲಿಕೆ ಹಾಗೂ ಗ್ರಾಹಕ ಕೇಂದ್ರಿತ ಸೇವೆ ಅಗತ್ಯವೆಂದು ಅವರು ಅಭಿಪ್ರಾಯಪಟ್ಟರು.
ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, 2025–26ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ಐತಿಹಾಸಿಕ 25% ಬೆಳವಣಿಗೆಗೆ ಕಾರ್ಯನಿರ್ವಹಿಸಿದ ಸಿಬ್ಬಂದಿಯನ್ನು ಅಭಿನಂದಿಸಿದರು. ಈ ಸಾಧನೆಯು ಸಿಬ್ಬಂದಿಯ ಸಮೂಹ ಬದ್ಧತೆ, ಕಠಿಣ ಪರಿಶ್ರಮ ಹಾಗೂ ಗ್ರಾಹಕ ಕೇಂದ್ರಿತ ಸೇವೆಯ ಪ್ರತಿಫಲವಾಗಿದೆ.
ಹೊಸದಾಗಿ ಆರಂಭಗೊಂಡಿರುವ ಶಾಖೆಗಳ ಸಾಧನೆಯನ್ನು ಉಲ್ಲೇಖಿಸಿದ ಅವರು, ಬ್ರಹ್ಮಾವರ ಶಾಖೆಯು ಕೇವಲ ಎರಡು ವರ್ಷಗಳಲ್ಲಿ ಲಾಭದಾಯಕತೆಯನ್ನು ಸಾಧಿಸಿರುವುದನ್ನು ಮತ್ತು ಹೊಸ ಶಾಖೆಗಳು ಅಲ್ಪಾವಧಿಯಲ್ಲೇ ₹10 ಕೋಟಿ ವ್ಯವಹಾರದ ಮೈಲಿಗಲ್ಲು ದಾಟಿರುವುದನ್ನು ಶ್ಲಾಘಿಸಿದರು. ಎಲ್ಲಾ ಸಿಬ್ಬಂದಿಯೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಗ್ರಾಹಕ ಸೇವೆಗೆ ಹೆಚ್ಚಿನ ಆದ್ಯತೆ ನೀಡಿ ಇನ್ನಷ್ಟು ಸಾಧನೆ ಮಾಡಲು ಕರೆ ನೀಡಿದರು.
ಬ್ಯಾಂಕಿನ ಸಲಹೆಗಾರರು ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ನ ಮಾಜಿ ಉಪ ಮಹಾಪ್ರಬಂಧಕರಾದ ಎಸ್.ಎಚ್. ವಿಶ್ವೇಶ್ವರಯ್ಯ ಅವರು ಬ್ಯಾಂಕಿನ ಠೇವಣಿ, ಸಾಲ ವಿತರಣೆ, ವ್ಯವಹಾರ ವಹಿವಾಟು, ಬೆಳವಣಿಗೆಯ ಪ್ರವೃತ್ತಿ ಹಾಗೂ ಎನ್‌ಪಿಎ ಸ್ಥಿತಿಯನ್ನು ಒಳಗೊಂಡ ಸಮಗ್ರ ಕಾರ್ಯಕ್ಷಮತಾ ವರದಿಯನ್ನು ಮಂಡಿಸಿದರು.
ಸಿಬ್ಬಂದಿ ಕಾರ್ಯಕ್ಷಮತೆ ಪರಿಶೀಲನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ವಹಿಸಿದ್ದರು. ದೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ವಾಲ್ಟರ್ ನಂದಳಿಕೆ, ಲೂರ್ಡ್ಸ್ ಸೆಂಟ್ರಲ್ ಶಾಲೆ, ಬಿಜೈನ ಪ್ರಾಂಶುಪಾಲರಾದ ವಂ. ಫಾ. ಜಾನ್ ಎಲ್. ಸಿಕ್ವೇರಾ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಎಸಿಪಿ ರವೀಶ್ ಎಸ್. ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ಬ್ಯಾಂಕಿನ ಮಹಾಪ್ರಬಂಧಕರಾದ ಸುನಿಲ್ ಮಿನೇಜಸ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರು ಶಾಖೆಯ ವ್ಯವಸ್ಥಾಪಕರಾದ ಮತಿ ಐರಿನ್ ಡಿಸೋಜಾ ಹಾಗೂ ಬಜ್ಪೆ ಶಾಖೆಯ ಸಿಬ್ಬಂದಿಯಾದ ಕುಮಾರಿ ವೈಲೆಟ್ ಕ್ರಾಸ್ತಾ ಅವರನ್ನು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಗೌರವಿಸಲಾಯಿತು. ಇತ್ತೀಚೆಗೆ ವಿವಾಹವಾದ ಸಿಬ್ಬಂದಿಯವರನ್ನೂ ಅಭಿನಂದಿಸಿ ಸನ್ಮಾನಿಸಲಾಯಿತು.
2025–26ನೇ ಸಾಲಿನ ಸ್ಟಾರ್ ಅಚೀವರ್ಸ್ ಪ್ರಶಸ್ತಿಯನ್ನು ಕುಲಶೇಖರ ಶಾಖೆಯ ವ್ಯವಸ್ಥಾಪಕರಾದ ವಿಲ್ಮಾ ಜ್ಯೋತಿ ಸಿಕ್ವೇರಾ, ಮೂಡುಬಿದಿರೆ ಶಾಖೆಯ ಶರೋನ್ ರೊಸಾರಿಯೊ, ಶಿರ್ವ ಶಾಖೆಯ ಅನ್ಸಿಲ್ಲಾ ಫೆರ್ನಾಂಡಿಸ್, ಕುಂದಾಪುರ ಶಾಖೆಯ ಜ್ಯೋತಿ ಬ್ಯಾರೆಟ್ಟೋ ಹಾಗೂ ಬೈಂದೂರು ಶಾಖೆಯ ಸಂದೀಪ್ ಕ್ವಾಡ್ರಸ್ ಅವರಿಗೆ ಪ್ರದಾನಿಸಲಾಯಿತು.
ಠೇವಣಿ ಮತ್ತು ಸಾಲ ವಿಭಾಗದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಯ ಪ್ರಶಸ್ತಿಯನ್ನು ಅಶೋಕನಗರ ಶಾಖೆ ಪಡೆದುಕೊಂಡಿತು. ಠೇವಣಿ ಸಂಗ್ರಹಣಾ ಶ್ರೇಷ್ಠತಾ ಪ್ರಶಸ್ತಿಯನ್ನು ಫೌಂಡರ್ಸ್, ಕುಲಶೇಖರ, ಮೂಡುಬಿದಿರೆ, ಶಿರ್ವ, ಬಜ್ಪೆ ಹಾಗೂ ಕಾರ್ಕಳ ಶಾಖೆಗಳು ಪಡೆದುಕೊಂಡರೆ, ಸಾಲ ಬೆಳವಣಿಗೆ ಶ್ರೇಷ್ಠತಾ ಪ್ರಶಸ್ತಿಯನ್ನು ಕುಂದಾಪುರ, ಪುತ್ತೂರು, ಬಿ.ಸಿ.ರೋಡ್ ಹಾಗೂ ಬ್ರಹ್ಮಾವರ ಶಾಖೆಗಳು ಪಡೆದವು. ಕಾಸಾ, ಠೇವಣಿ ಮತ್ತು ಸಾಲ ಗುರಿಗಳ ಸಾಧನೆಗಾಗಿ ನೀಡಲಾದ ಅತ್ಯುತ್ತಮ ಶಾಖೆ ಸಾಧನೆ ಪ್ರಶಸ್ತಿಯನ್ನು ಉಡುಪಿ, ಬೆಳ್ತಂಗಡಿ, ಬೆಳ್ಮಣ್, ಬೈಂದೂರು ಹಾಗೂ ಸಂತೆಕಟ್ಟೆ ಶಾಖೆಗಳು ಪಡೆದುಕೊಂಡವು. ಅತಿ ಹೆಚ್ಚು ವ್ಯವಹಾರ ವಹಿವಾಟು ಪ್ರಶಸ್ತಿಯನ್ನು ಫೌಂಡರ್ಸ್ ಶಾಖೆ ಪಡೆದುಕೊಂಡರೆ, ಒಂದು ವರ್ಷದ ಮೈಲಿಗಲ್ಲು ಸಾಧನೆ ಪ್ರಶಸ್ತಿಯನ್ನು ಬೆಳ್ಮಣ್, ಬೆಳ್ತಂಗಡಿ ಹಾಗೂ ಬೈಂದೂರು ಶಾಖೆಗಳು ಪಡೆದುಕೊಂಡವು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಜೋಸೆಫ್ ಅನಿಲ್ ಪತ್ರಾವೊ, ಅಂಡ್ರೂ÷್ಯ ಡಿಸೋಜ, ಹೆರಾಲ್ಡ್ ಮೊಂತೇರೊ, ಮೆಲ್ವಿನ್ ವಾಸ್, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ಡಾ} ಜೆರಾಲ್ಡ್ ಪಿಂಟೊ, ಫೆಲಿಕ್ಸ್ ಡಿಕ್ರುಜ್, ವ್ಯತ್ತಿಪರ ನಿರ್ದೇಶಕರಾದ ಸಿ.ಜಿ.ಪಿಂಟೊ ಉಪಸ್ಥಿತರಿದ್ದರು.










