ವಿಟ್ಲ, ಜೂ. 18 : ಲಾರಿಯ ಅಡಿಗೆ ಸಿಲುಕಿ ಚಾಲಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು ಧರ್ಮಸ್ಥಳ ಪರಿಸರದ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.
ಚಾಲಕ ಮಹೇಶ್ ಅವರು ಲಾರಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ವೈಫಲ್ಯವನ್ನು ಸರಿಪಡಿಸಲು ಲಾರಿಯ ಕೆಳಗೆ ಹೋಗಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಲಾರಿ ಮುಂದೆ ಚಲಿಸಿದ್ದರಿಂದ, ಅವರು ಲಾರಿಯ ಚಕ್ರಗಳ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕೂಡಲೇ ಸ್ಥಳೀಯ ಕಾರ್ಮಿಕರು ಹಾಗೂ ಕನ್ಯಾನದ ಸದ್ಗುರು ಅಂಬ್ಯುಲೆನ್ಸ್ ಚಾಲಕರು ಸೇರಿ ಲಾರಿಯ ಅಡಿಯಿಂದ ಮೃತದೇಹವನ್ನು ತೆರವುಗೊಳಿಸಿದ್ದಾರೆ. ಬಳಿಕ ಮೃತದೇಹವನ್ನು ವಿಟ್ಲದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾನೂನು ಪ್ರಕ್ರಿಯೆ ಮುಂದುವರೆದಿದೆ.











