ಮಂಗಳೂರು, ಜೂ. 24 : ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ 2007ರಲ್ಲಿ ಆರಂಭಗೊಂಡ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳದ 16ನೇ ಆವೃತ್ತಿಯು ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಶನಿವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ಸುತ್ತಮುತ್ತಲಿನ 4 ರಾಜ್ಯಗಳ ಅಭ್ಯರ್ಥಿಗಳಿಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುವ ವಿಶ್ವಾಸಾರ್ಹ ವೇದಿಕೆಯಾಗಿ ಆಳ್ವಾಸ್ ಪ್ರಗತಿ ಬೆಳೆದಿದೆ ಎಂದರು.
ಸಿಎಸ್‌ಆರ್ ಅಂಗವಾಗಿ ಆಯೋಜಿಸಲಾಗುವ ಪ್ರಗತಿ ಉದ್ಯೋಗ ಮೇಳವು ಉದ್ಯೋಗಾಕಾಂಕ್ಷಿಗಳು ಹಾಗೂ ಕಂಪನಿಗಳಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಇದುವರೆಗೆ ಪ್ರತಿಷ್ಠಾನವು 22 ಉದ್ಯೋಗ ಮೇಳಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. 66,432 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದು, 40,848 ಮಂದಿಗೆ ಸ್ಥಳದಲ್ಲಿಯೇ ಉದ್ಯೋಗ ಆಫರ್ ದೊರೆತಿದೆ ಎಂದು ತಿಳಿಸಿದರು.
ಈ ಬಾರಿಯ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಉದ್ಯೋಗ ಮೇಳದಲ್ಲಿ 300ಕ್ಕೂ ಅಧಿಕ ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಐಟಿ, ಬ್ಯಾಂಕಿಂಗ್, ಉತ್ಪಾದನೆ, ಔಷಧೋದ್ಯಮ, ಮಾಧ್ಯಮ, ಆರೋಗ್ಯ, ಆತಿಥ್ಯ, ನಿರ್ಮಾಣ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೇಮಕಾತಿ ನಡೆಯಲಿದೆ ಎಂದರು.
ವೈದ್ಯಕೀಯ, ಎಂಜಿನಿಯರಿಂಗ್, ಕಲಾ, ವಾಣಿಜ್ಯ, ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸ್‌ಎಸ್‌ಎಲ್‌ಸಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಿರಲಿವೆ ಎಂದು ತಿಳಿಸಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ವಿಶೇಷ ಓರಿಯಂಟೇಷನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಆಗಸ್ಟ್ 6ರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಅಭ್ಯರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಮತ್ತು ಐಟಿಐ ಅಭ್ಯರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಉದ್ಯೋಗಾಕಾಂಕ್ಷಿಗಳಿಗೆ ಆನ್‌ಲೈನ್ ಕಡ್ಡಾಯವಾಗಿದ್ದು, ನೋಂದಣಿಯನ್ನು www.alvaspragati.com/candidate-registration ನಲ್ಲಿ ಉಚಿತವಾಗಿಗ ಮಾಡಬಹುದಾಗಿದೆ. ಆಗಸ್ಟ್ 7ರಂದು ಬೆಳಿಗ್ಗೆ 8 ಗಂಟೆಗೆ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಹಾಜರಿರಬೇಕು. 5-10 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು, ನವೀಕರಿಸಿದ ರೆಸ್ಯೂಮ್, ಅಂಕಪಟ್ಟಿಗಳ ದೃಢೀಕೃತ ಜೆರಾಕ್ಸ್ ಪ್ರತಿಗಳು ಹಾಗೂ ನೋಂದಣಿ ಸಂಖ್ಯೆಯನ್ನು ತರಬೇಕು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ 9741440490, 9611750531 ಹಾಗೂ 7975223865 ಸಂಖ್ಯೆಗಳ ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ನೇಮಕಾತಿ ವಿಭಾಗದ ಮುಖ್ಯಸ್ಥೆ ರಂಜಿತಾ ಆಚಾರ್ಯ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.











