ಶಿವಮೊಗ್ಗ, ಜೂ. 28 : ಶಿಕಾರಿಪುರದಿಂದ ಮಂಗಳೂರಿಗೆ ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿಯೊಂದರಲ್ಲಿ ಚಲಿಸುತ್ತಿರುವಾಗಲೇ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಲಾರಿಯ ಮುಂಭಾಗ ಸಂಪೂರ್ಣ ಸುಟ್ಟುಹೋದ ಘಟನೆ ತಾಲೂಕಿನ ನಿಟ್ಟೂರು ಸಮೀಪದ ಬೇಳೂರು ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಘಟನೆ ಸಂಭವಿಸಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ವಾಹನ ಚಾಲಕ ಮಹಮ್ಮದ್ ಹುಸೇನ್ ಲಾರಿಯನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗಿಳಿದ್ದರಿಂದ ಪ್ರಾಣಪಾಯವಾಗಿಲ್ಲ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅಷ್ಟರಲ್ಲಿ ಲಾರಿಯ ಮುಂಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.











